ನವದೆಹಲಿ: ಕಳೆದ ವರ್ಷ ಈಶಾನ್ಯ ರಾಜ್ಯಗಳಲ್ಲಿ ಸಂಭವಿಸಿದ ಹಿಂಸಾಚಾರಗಳ ಪೈಕಿ, ಮಣಿಪುರದಲ್ಲಿಯೇ ಅಧಿಕ ಶೇ 77ರಷ್ಟು ಪ್ರಕರಣಗಳು ವರದಿಯಾಗಿವೆ.
ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದ್ದು, ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವೇ ಹಿಂಸಾಚಾರಗಳಿಗೆ ಕಾರಣ ಎಂದು ವಿವರಿಸಲಾಗಿದೆ.
2022ಕ್ಕೆ ಹೋಲಿಸಿದರೆ, ಜನಾಂಗೀಯ ಸಂಘರ್ಷ ಪರಿಣಮವಾಗಿ ಕಳೆದ ವರ್ಷ ಮಣಿಪುರದಲ್ಲಿ ನಾಗರಿಕರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿ ಸಾವುಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
ಕಳೆದ ವರ್ಷ ಮೇ 3ರಂದು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಭಾರಿ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತ್ತು. ಇದರಿಂದ ಸಾಕಷ್ಟು ಜನರ ಗಾಯಗೊಂಡರಲ್ಲದೇ, ನೂರಾರು ಜನರು ಮೃತಪಟ್ಟರು. ಹಲವೆಡೆ ಸ್ವತ್ತುಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ನಡೆದವು ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿನ ಪ್ರಮುಖ ಅಂಶಗಳು
ಕಳೆದ ವರ್ಷ ಈಶಾನ್ಯ ರಾಜ್ಯಗಳಲ್ಲಿ 243 ಹಿಂಸಾಚಾರ ಘಟನೆಗಳು ವರದಿಯಾಗಿದ್ದು ಈ ಪೈಕಿ ಮಣಿಪುರದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 183
ಬಂಡುಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ 33 ಬಂಡುಕೋರರ ಹತ್ಯೆ ಮಾಡಲಾಗಿದ್ದು 184 ಮಂದಿಯನ್ನು ಬಂಧಿಸಲಾಗಿದೆ
49 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಡುಕೋರ ಸಂಘಟನೆಗಳ 80 ಸದಸ್ಯರು ಶರಣಾಗಿದ್ದು 31 ಆಯುಧಗಳನ್ನು ಒಪ್ಪಿಸಿದ್ದಾರೆ
ಈಶಾನ್ಯ ರಾಜ್ಯಗಳಲ್ಲಿ ಕಂಡುಬಂದ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಸರಣಿ ಕ್ರಮಗಳನ್ನು ಕೈಗೊಂಡಿತ್ತು.