ಭುವನೇಶ್ವರ: ಒಡಿಶಾ ಸರ್ಕಾರವು 80 ವರ್ಷ ಮೇಲ್ಪಟ್ಟ ಹಾಗೂ ಶೇ.80ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಾಸಿಕ ₹3,500ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
ಈ ಮೂಲಕ ಇದೇ ತಿಂಗಳಿಂದಲೇ (ಜನವರಿ) ₹1,200 ಹೆಚ್ಚಿನ ಪಿಂಚಣಿಯ ಹಣವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಪ್ರಧಾನ ಮಂತ್ರಿ ಸೂರ್ಯ ಘರ್: ಮುಫ್ತ್ ಬಿಜಿಲಿ' ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಈ ಯೋಜನೆಯಿಂದ ಸುಮಾರು 3 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಮೇಲ್ಛಾವಣಿ ಸೌರ ಫಲಕಗಳ ಸ್ಥಾಪನೆಗೆ ಹಣಕಾಸು ನೆರವು ಒದಗಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.1 ಕಿಲೋ ವ್ಯಾಟ್ (ಕೆಡಬ್ಲ್ಯು) ಮೇಲ್ಛಾವಣಿ ಸೋಲಾರ್ ಪ್ಯಾನಲ್ ಅಳವಡಿಕೆಗೆ ಕೇಂದ್ರ ಸರಕಾರ ₹30 ಸಾವಿರ ಹಾಗೂ ರಾಜ್ಯ ಸರ್ಕಾರ ₹25 ಸಾವಿರ ಸಹಾಯಧನ ಒದಗಿಸಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಅಹುಜಾ ಮಾಹಿತಿ ನೀಡಿದ್ದಾರೆ.
ಸುಭದ್ರಾ ಯೋಜನೆ, ಎಂಕೆಯುವೈ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಸಮರ್ಪಕ ಜಾರಿ ಕುರಿತು ಚರ್ಚೆ ನಡೆಸಲಾಯಿತು. ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ಮತ್ತು ಡ್ರೈ ಲ್ಯಾಟ್ರಿನ್‌ಗಳ ನಿರ್ಮಾಣ (ನಿಷೇಧ) ಕಾಯಿದೆ 1993 ಅನ್ನು ರದ್ದುಗೊಳಿಸಲಾಗವುದು ಎಂದು ಅಹುಜಾ ಹೇಳಿದ್ದಾರೆ.