ನವದೆಹಲಿ: ಅಜ್ಮೇರ್ ಶರೀಫ್ ದರ್ಗಾದಲ್ಲಿ ಆರಂಭವಾಗುತ್ತಿರುವ 813ನೇ ಉರುಸ್‌ಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾದರ್ ಸಮರ್ಪಿಸುತ್ತಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಖಿ ಅವರ ಮೂಲಕ ಈ ವಾರ್ಷಿಕ ಉತ್ಸವದ ಸಂದರ್ಭಕ್ಕಾಗಿ ಚಾದರ್ ಅರ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಈವರೆಗೂ ಅಜ್ಮೇರ್ ಶರೀಫ್ ದರ್ಗಾಕ್ಕೆ ಹತ್ತು ಬಾರಿ ಚಾದರ್ ಅರ್ಪಿಸಿದ್ದಾರೆ. ಕಳೆದ ಬಾರಿ ಉರುಸ್ ಸಂದರ್ಭದಲ್ಲಿ ಕೇಂದ್ರ ಸಚಿವೆಯಾಗಿದ್ದ ಸ್ಮೃತಿ ಇರಾನಿ ಹಾಗೂ ಜಮಾಲ್ ಸಿದ್ಧಿಖಿ ಅವರು ಪ್ರಧಾನಿ ನೀಡಿದ್ದ ಚಾದರ್ ಅರ್ಪಿಸಿದ್ದರು.
ಭಕ್ತಿ ಹಾಗೂ ಗೌರವದ ಸಂಕೇತವಾಗಿ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಹಲವರು ಹರಕೆಯ ರೂಪದಲ್ಲಿ ಚಾದರ್ ಅರ್ಪಿಸುತ್ತಾರೆ. ಉರುಸ್ ಸಂದರ್ಭದಲ್ಲಿ ಚಾದರ್ ನೀಡುವುದನ್ನು ಆರಾಧನೆಯ ಪ್ರಬಲ ರೂಪ ಎಂದೇ ಹೇಳಲಾಗುತ್ತದೆ.
ಭಾರತದಲ್ಲಿರುವ ಸೂಫಿ ಸಂತರ ದರ್ಗಾಗಲ್ಲಿ ಅಜ್ಮೇರ್ ಶರೀಫ್ ದರ್ಗಾ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಜಗತ್ತಿನ ಹಲವು ಕಡೆಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಖ್ವಾಜಾ ಮೊಯಿನುದ್ದೀನ್ ಹಸನ್ ಚಿಶ್ತಿ ಅವರ ಪುಣ್ಯ ಸ್ಮರಣೆಯನ್ನು ಇಲ್ಲಿ ಆಚರಿಸಲಾಗುತ್ತದೆ.