ಅರೂಷಾ (AP): ಉತ್ತರ ತಾಂಜಾನಿಯಾದಲ್ಲಿ ಶಂಕಿತ ಮಾರ್ಬರ್ಗ್ ವೈರಸ್‌ನಿಂದ ಎಂಟು ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಬುಧವಾರ ತಿಳಿಸಿದೆ.
ಇಲ್ಲಿವರೆಗೆ ಸುಮಾರು 9 ಪ್ರಕರಣಗಳು ದಾಖಲಾಗಿದ್ದು, 8 ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್‌ಒನ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಬೋಲಾ ವೈರಸ್‌ನಂತೆ ಮಾರ್ಬರ್ಗ್ ವೈರಸ್ ಕೂಡ ಬಾವಲಿಗಳಿಂದ (ಫ್ರೂಟ್ ಬ್ಯಾಟ್) ಹುಟ್ಟುತ್ತದೆ. ಇದು ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ರೋಗಲಕ್ಷಣಗಳು: ಜ್ವರ, ಸ್ನಾಯು ನೋವು, ವಾಂತಿ ಭೇದಿ ಮತ್ತು ಕೆಲವೊಮ್ಮ ಅತಿಯಾದ ರಕ್ತ ಕೊರತೆಯಿಂದ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಈ ಕಾಯಿಲೆಗೆ ಯಾವುದೇ ಅಧಿಕೃತ ಲಸಿಕೆ ಮತ್ತು ಚಿಕಿತ್ಸೆ ಇಲ್ಲ.
ಈ ಸೋಂಕಿನ ಅಪಾಯದ ಪ್ರಮಾಣ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚಿದ್ದು, ಜಾಗತಿಕವಾಗಿ ಕಡಿಮೆಯಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. ಆದರೆ, ಈ ಕುರಿತು ತಾಂಜಾನಿಯಾದ ಆರೋಗ್ಯ ಅಧಿಕಾರಿಗಳಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.