ಮಂಜೇಶ್ವರ: ತಲಪಾಡಿ ಟೋಲ್ ಗೇಟ್ ಸ್ಥಾಪಿತಗೊಂಡ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ನಿವಾಸಿಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗುತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ ರದ್ದು ಪಡಿಸಿ ಈ ಭಾಗದಿಂದ ತೆರಳುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತಿದೆ.
ಆದರೆ ಈ ಬಗ್ಗೆ ತಡವಾಗಿಯಾದರೂ ಎಚ್ಚೆತ್ತುಕೊಂಡ ಸ್ಥಳೀಯರು ಇದೀಗ ತಮಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ಟೋಲ್ ಗೇಟ್ ಕ್ರಿಯಾ ಸಮಿತಿಯನ್ನು ರೂಪೀಕರಿಸಿ ಹೆದ್ದಾರಿ ಪ್ರಾಧಿಕಾರ, ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಿಗೂ ಹಲವು ಸಲ ಮನವಿಗಳನ್ನು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಟೋಲ್ ಗೇಟ್ ಕ್ರಿಯಾ ಸಮಿತಿ ಸ್ಥಳೀಯರನ್ನು ಒಗ್ಗೂಡಿಸಿ ಇದೀಗ ಹೋರಾಟಕ್ಕೆ ಸಜ್ಜಾಗಿದೆ.
ಬುಧವಾರ ಕ್ರಿಯಾ ಸಮಿತಿ ಅಧ್ಯಕ್ಷೆ ಹಾಗೂ ಮಂಜೇಶ್ವರದ ಪ್ರಥಮ ಪ್ರಜೆ ಜೀನ್ ಲವಿನಾ ಮೊಂತೇರೋ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಕನ್ವೀನರ್ ಹಾಗೂ ವಾರ್ಡ್ ಸದಸ್ಯ ಅಬ್ದುಲ್ ರಹೀಂ ವಿಷಯಗಳನ್ನು ಮಂಡಿಸಿದರು.
ಇದರ ಮುಂದುವರಿದ ಭಾಗವಾಗಿ ಸ್ಥಳೀಯರಿಗೆ ಆಗಿರುವ ಅನ್ಯಾಯವನ್ನು ಎದುರಿಸಲು ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ಜನವರಿ 8 ರಂದು ಸಂಜೆ 4 ಗಂಟೆಗೆ ಸೂಚನಾ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೆ ಅಧಿಕಾರಿಗಳಿಂದ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ಲಭಿಸದೇ ಇದ್ದಲ್ಲಿ ನ್ಯಾಯ ಲಭಿಸುವ ವರೆಗೆ ಹೋರಾಟವನ್ನು ಮುಂದುವರಿಸಲು ಸೇರಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸ್ಥಳೀಯರು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ ನೇತಾರರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.