ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಮೂತ್ರಪಿಂಡ (ಕಿಡ್ನಿ) ಮಾರಾಟ ಮತ್ತು ಕಸಿ ಜಾಲದ ಬಗ್ಗೆ ಸಿಐಡಿ ತನಿಖೆಗೆ ತೆಲಂಗಾಣ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ. ಇದರ ಬೆನ್ನಲ್ಲೇ, ಈ ಜಾಲದಲ್ಲಿ ಭಾಗಿಯಾದ ಆರೋಪದ ಮೇರೆಗೆ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮತ್ತು ಕರ್ನಾಟಕ ಸೇರಿ ಇತರ ರಾಜ್ಯಗಳಿಂದ ಕಿಡ್ನಿ ದಾನಿಗಳು ಮತ್ತು ಪಡೆಯುವವರನ್ನು ಹೈದರಾಬಾದ್‌ಗೆ ಕರೆತಂದು, ಅಲಕಾನಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿತ್ತು. ಪ್ರತಿ ಕಿಡ್ನಿ ಕಸಿಗೆ ಸುಮಾರು ₹55 ಲಕ್ಷ ವಸೂಲಿ ಮಾಡುತ್ತಿದ್ದು, ದಾನಿಗಳಿಗೆ ₹5 ಲಕ್ಷ ಪಾವತಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸರೂರ ನಗರದಲ್ಲಿ ಈ ಆಸ್ಪತ್ರೆಯನ್ನು ರಾಚಕೊಂಡ ಪೊಲೀಸರು ಮಂಗಳವಾರ ಸಂಜೆಯೇ ವಶಕ್ಕೆ ಪಡೆದಿದ್ದಾರೆ. ಶೋಧದ ವೇಳೆ, ಆಸ್ಪತ್ರೆಯಲ್ಲಿ ಇಬ್ಬರು ಕಿಡ್ನಿ ದಾನಿಗಳು ಮತ್ತು ಕಿಡ್ನಿ ಕಸಿ ಮಾಡಿಸಿಕೊಂಡ ಇಬ್ಬರು ವ್ಯಕ್ತಿಗಳು ಕಂಡುಬಂದರು. ಈ ನಾಲ್ವರನ್ನು ಪೊಲೀಸರು ಸರ್ಕಾರಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಇತರೆ ರಾಜ್ಯಗಳ ವೈದ್ಯರು ತಲೆಮರೆಸಿಕೊಂಡಿದ್ದಾರೆ.
ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆರೋಗ್ಯ ಸಚಿವ ದಾಮೋದರ ರಾಜನರಸಿಂಹ ಅವರು ಶುಕ್ರವಾರ ಆದೇಶ ಹೊರಡಿಸಿದ್ದು, ಈ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆಯೂ ಸಿಐಡಿಗೆ ಸೂಚಿಸಿದ್ದಾರೆ.