ಅಹಮದಾಬಾದ್: ಮೂರನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಅನುಮಾನ ವ್ಯಕ್ತಪಡಿಸಿದ್ದಾರೆ.
ಥಾಲ್ತೇಜ್ ಪ್ರದೇದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಗಾರ್ಗಿ ರಣ್‌ಪಾರಾ ಎಂದು ಗುರುತಿಸಲಾಗಿದೆ.
'ಇಂದಿನಂತೆ ಶಾಲೆಗೆ ಬಂದ ಗಾರ್ಗಿ ತನ್ನ ತರಗತಿಯತ್ತ ಹೋಗುತ್ತಿದ್ದಳು. ಈ ಮಧ್ಯೆ ಆಕೆ ಕಾರಿಡಾರ್ ಬಳಿಯ ಕುರ್ಚಿಯ ಮೇಲೆ ಕುಳಿತು ವಿಶಾಂತ್ರಿ ಪಡೆದಿದ್ದಾಳೆ. ಆಕೆ ಆಯಾಸಗೊಂಡಂತೆ ಕಂಡು ಬಂದಿದ್ದಳು' ಎಂದು ಶಾಲೆಯ ಮುಖ್ಯಶಿಕ್ಷಕಿ ಶರ್ಮಿಷ್ಠ ಸಿನ್ಹಾ ತಾವು ಕಂಡ ಸಿಸಿಟಿವಿ ದೃಶ್ಯಗಳನ್ನು ವಿವರಿಸಿದ್ದಾರೆ.
ಬಾಲಕಿ ಅಸ್ವಸ್ಥಗೊಂಡು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಗೆ ಶಿಕ್ಷಕರು ಸಿಪಿಆರ್ ಮಾಡಿದ್ದಾರೆ. ಬಳಿಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ ಎಂದು ಶಿಕ್ಷಕಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಾಲಕಿ ಹೃದಯ ಸ್ತಂಭನದಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿಯಲು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.