ಅಹಮದಾಬಾದ್: ಗುಜರಾತ್‌ನಲ್ಲಿ 9 ತಿಂಗಳ ಮಗುವಿನಲ್ಲಿ ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 6ರಂದು ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗಂಡು ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನಲ್ಲಿ ಎಚ್‌ಎಂಪಿವಿ ಸೋಂಕು ಇರುವುದು ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮಗು, ಪೋಷಕರು ವಿದೇಶಿ ಅಥವಾ ಇತರ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಜರಾತ್‌ನ ಸಬರಕಾಂತ ಜಿಲ್ಲೆಯ ಎಂಟು ವರ್ಷದ ಬಾಲಕನಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿತ್ತು.
ಜ.6 ರಂದು ಗುಜರಾತ್‌ನಲ್ಲಿ ಎಚ್‌ಎಂಪಿವಿ ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು. ರಾಜಸ್ಥಾನದ ಎರಡು ತಿಂಗಳ ಮಗು ಜ್ವರ, ಮೂಗು ಕಟ್ಟುವಿಕೆ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳಿರುವ ವೈರಲ್ ಕಾಯಿಲೆಯಿಂದ ಬಳಲುತ್ತಿರುವುದು ಕಂಡುಬಂದಿತ್ತು.
ಗುರುವಾರ, ಅಹಮದಾಬಾದ್ ನಗರದಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಪರೀಕ್ಷೆ ಮಾಡಿಸಿಕೊಂಡಾಗ ಎಚ್‌ಎಂಪಿವಿ ಸೋಂಕು ಇರುವುದು ದೃಢಪಟ್ಟಿತ್ತು. ಅಸ್ತಮಾದಿಂದ ಬಳಲುತ್ತಿದ್ದ ರೋಗಿಯು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಎಂಸಿಎಚ್) 10 ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಏರಿಕೆಯಾಗಿರುವ ಬೆನ್ನಲ್ಲೇ ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಎಚ್‌ಎಂಪಿವಿ ಪ್ರಕರಣಗಳು ದೃಢಪಟ್ಟಿವೆ.