HEALTH TIPS

ವಾರಕ್ಕೆ 90 ಗಂಟೆ ದುಡಿಮೆ: L&T ಅಧ್ಯಕ್ಷರ ಮಾತಿಗೆ ನಟಿ ದೀಪಿಕಾ ಸಹಿತ ಹಲವರು ಕಿಡಿ

 ಮುಂಬೈ: ವಾರಕ್ಕೆ 70 ಗಂಟೆ ದುಡಿಮೆ ಅಗತ್ಯ ಎಂದಿದ್ದ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್. ನಾರಾಯಣಮೂರ್ತಿ ಅವರ ಮಾತು ಸಾಕಷ್ಟು ಕಿಡಿ ಹೊತ್ತಿಸಿತ್ತು. ಎಲ್‌ಅಂಡ್‌ಟಿ ಕಂಪನಿಯ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರೂ ಇದೀಗ 90 ಗಂಟೆಗಳ ದುಡಿಮೆ ಅಗತ್ಯ ಎಂದಿರುವುದು ಖ್ಯಾತ ನಾಮರ ಸಹಿತ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


'ಮನೆಯಲ್ಲೇ ಇದ್ದು ಹೆಂಡತಿಯನ್ನು ಎಷ್ಟೂ ಅಂತ ನೋಡುತ್ತೀರಿ' ಎಂದು ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಸುಬ್ರಹ್ಮಣ್ಯನ್, 'ಮನೆಯಲ್ಲಿ ಕಡಿಮೆ ಸಮಯ ಕಳೆಯಿರಿ. ಕಚೇರಿಯಲ್ಲಿ ಹೆಚ್ಚು ದುಡಿಮೆಯಲ್ಲಿ ತೊಡಗಿಸಿಕೊಳ್ಳಿ' ಎಂದಿದ್ದರು.

ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ವಿಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇವರ ಹೇಳಿಕೆಯೊಂದಿಗೆ ನಾರಾಯಣಮೂರ್ತಿ ಅವರ ಹೇಳಿಕೆಯನ್ನೂ ಉಲ್ಲೇಖಿಸಿ ಹಲವರು ಮೀಮ್ಸ್‌ಗಳನ್ನು ಹರಿಯಬಿಟ್ಟರೆ, ಇನ್ನೂ ಕೆಲವರು ಲೇವಡಿ ಮಾಡಿದ್ದಾರೆ. ಮತ್ತೂ ಕೆಲವರು ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಕೆಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

ಸುಬ್ರಹ್ಮಣ್ಯನ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಹಾಗೂ 'ದಿ ಲೀವ್‌ ಲವ್‌ ಲಾಫ್‌' ಪ್ರತಿಷ್ಠಾನದ ಸಂಸ್ಥಾಪಕಿ ದೀಪಿಕಾ ಪಡುಕೋಣೆ ಅವರು ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ದೀಪಿಕಾ, ರಜಾ ದಿನವಾದ ಭಾನುವಾರವೂ ಕೆಲಸ ಮಾಡುವ ಹಾಗೂ ಹೆಂಡತಿಯನ್ನು ಎಷ್ಟೂ ಅಂತ ನೋಡುತ್ತೀರಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, 'ಅಂಥ ದೊಡ್ಡ ಸ್ಥಾನದಲ್ಲಿರುವ ಹಿರಿಯರು ಇಂಥ ಹೇಳಿಕೆ ನೀಡುವುದು ಆಘಾತಕಾರಿ. #mentalhealthmatters' ಎಂದು ಬರೆದುಕೊಂಡಿದ್ದಾರೆ.

ಸುಬ್ರಹ್ಮಣ್ಯನ್ ಅವರ ಮಾತನ್ನು ಎಲ್‌ಅಂಡ್‌ಟಿ ಬೆಂಬಲಿಸಿರುವುದನ್ನೂ ಹಂಚಿಕೊಂಡಿರುವ ದೀಪಿಕಾ, 'ಹೇಳಿಕೆಯನ್ನೇ ಇವರು ಇನ್ನಷ್ಟು ಹದಗೆಡಿಸಿದರು' ಎಂದಿದ್ದಾರೆ.

'ಸುಬ್ರಹ್ಮಣ್ಯನ್ ಅವರಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಇದನ್ನು ಪರಿಹರಿಸುವ ಅಗತ್ಯವಿದೆ' ಎಂದು ಹೇಳಿದ್ದಾರೆ.

ದೀಪಿಕಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಆಗಾಗ್ಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡುತ್ತಾರೆ. ಅಲ್ಲರೆ, ಲಾಭರಹಿತ ಸಂಸ್ಥೆಯಾದ ಲೈವ್‌ ಲವ್‌ ಲಾಫ್‌ ಫೌಂಡೇಶನ್‌ನ ಸಂಸ್ಥಾಪಕಿ ಕೂಡ ಆಗಿದ್ದಾರೆ.

ಎಲ್‌ಅಂಡ್‌ಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, 'ಇದು ಭಾರತದ ದಶಕ. ದೇಶವನ್ನು ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿಸಬೇಕೆಂದರೆ ಸಂಘಟಿತ ದುಡಿಮೆಯನ್ನು ಅತ್ಯಂತ ಬದ್ಧತೆ ಹಾಗೂ ಪರಿಶ್ರಮದಿಂದ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧ್ಯಕ್ಷರ ಮಾತು ವಿಶಾಲವಾದ ಅರ್ಥವನ್ನು ಹೊಂದಿದೆ. ರಾಷ್ಟ್ರ ನಿರ್ಮಾಣ ವಿಷಯವನ್ನು ಎಲ್‌ಅಂಡ್‌ಟಿ ತನ್ನ ಧ್ಯೇಯವೆಂದೇ ನಂಬಿದೆ. ಕಳೆದ 8 ದಶಕಗಳಿಂದ ಭಾರತದ ಮೂಲಸೌಕರ್ಯ, ಕೈಗಾರಿಕೆ ಹಾಗೂ ತಂತ್ರಜ್ಞಾನವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕಂಪನಿ ಮಹತ್ತರ ಪಾತ್ರ ವಹಿಸಿದೆ' ಎಂದಿತ್ತು.

ಈ ಹೇಳಿಕೆಗಳಿಗೆ ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ ಗೊಯೆಂಕಾ ಅವರೂ ಕಿಡಿಯಾಡಿದ್ದಾರೆ. 'ಇದು ಸಂಪೂರ್ಣ ಸೀದುಹೋಗುವಂತ ಪಾಕವಿಧಾನ' ಎಂದಿದ್ದಾರೆ. ಭಾನುವಾರವನ್ನು 'Sun-duty' ಎಂದೇಕೆ ಮರುನಾಮಕರಣ ಮಾಡಬಾರದು. ವೃತ್ತಿ ಹಾಗೂ ಬದುಕಿನ ನಡುವೆ ಎಂದಿಗೂ ಆಯ್ಕೆಯಗಳಿರಬಾರದು. ಏಕೆಂದರೆ ಎರಡೂ ಅತಿ ಮುಖ್ಯ ಎಂದಿದ್ದಾರೆ.

'ಸಿಇಒಗೆ ಅತಿಹೆಚ್ಚು ವೇತನ ಸಿಗುತ್ತದೆ. ಕೆಲಸದಲ್ಲಿನ ಒತ್ತಡ ಭಿನ್ನವಾಗಿರುತ್ತದೆ. ಆದರೆ, ತನಗಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ಕೂಡ ತಾನು ಮಾಡುವಷ್ಟೇ ಕೆಲಸ ಮಾಡಬೇಕೆಂದು ಅಪೇಕ್ಷಿಸುವುದು ತಪ್ಪು' ಎಂದು ಜಾಲತಾಣಿಗರು ಟೀಕಿಸಿದ್ದಾರೆ.

ವೃತ್ತಿ ಅವಧಿ ಕುರಿತ ಚರ್ಚೆಯಲ್ಲಿ ಕಳೆದ ತಿಂಗಳು ಗೌತಮ್ ಅದಾನಿ ಪಾಲ್ಗೊಂಡು, 'ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಾದರೆ ಹೆಂಡತಿ ಬಿಟ್ಟು ಹೋಗುತ್ತಾಳೆ' ಎಂದಿದ್ದರು.

'ಕೆಲಸ ಮತ್ತು ಜೀವನ ನಿರ್ವಹಣೆ ಕುರಿತ ನಿಮ್ಮ ಆಲೋಚನೆಯನ್ನು ನನ್ನ ಮೇಲೆ ಹೇರಬೇಡಿ. ಹಾಗೆಯೇ ನನ್ನ ಆಲೋಚನೆಗಳನ್ನು ಎಂದಿಗೂ ನಾನು ನಿಮ್ಮ ಮೇಲೆ ಹೇರುವುದಿಲ್ಲ. ಕೆಲವರು ಕುಟುಂಬದೊಂದಿಗೆ ದಿನದಲ್ಲಿ 4 ಗಂಟೆಯಷ್ಟೇ ಕಳೆದು ಸಂತೋಷದಿಂದಿರಬಹುದು. ಇನ್ನೂ ಕೆಲವರು ಅದಕ್ಕೆ ಎಂಟು ಗಂಟೆ ಕಳೆಯಬಹುದು. ಇದನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡಬಹುದು. ಆದರೆ ಕುಟುಂಬದೊಂದಿಗೇ 8 ಗಂಟೆ ಕಳೆದರೆ ಹೆಂಡತಿಯೇ ಓಡಿಹೋಗುವ ಅಪಾಯವೂ ಇದೆ' ಎಂದಿದ್ದರು.

ಸುಬ್ರಹ್ಮಣ್ಯನ್‌ ವಾರ್ಷಿಕ ವೇತನ ₹51 ಕೋಟಿ

ವಾರ್ಷಿಕ ₹51 ಕೋಟಿ ಸಂಬಳ 2023-24ರಲ್ಲಿ ಸುಬ್ರಹ್ಮಣ್ಯನ್ ಅವರು ₹51 ಕೋಟಿ ವೇತನದ ಪ್ಯಾಕೇಜ್‌ ಪಡೆದಿದ್ದಾರೆ ಎಂದು ಕಂಪನಿಯ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಇದು ಕಂಪನಿಯ ಉದ್ಯೋಗಿಗಳ ಸರಾಸರಿ ಸಂಬಳಕ್ಕಿಂತ 534 ಪಟ್ಟು ಹೆಚ್ಚಿದೆ. ಈ ಪ್ಯಾಕೇಜ್‌ನಲ್ಲಿ ಮೂಲ ವೇತನ ₹3.6 ಕೋಟಿ ಇದ್ದರೆ ಪೂರ್ವಾಗತ್ಯದ ರೂಪದಲ್ಲಿ ₹1.67 ಕೋಟಿ ನೀಡಲಾಗಿದೆ. ಕಮಿಷನ್‌ ಲೆಕ್ಕದಲ್ಲಿ ₹35.28 ಕೋಟಿ ಪಡೆದಿದ್ದಾರೆ. ನಿವೃತ್ತಿ ಸೌಲಭ್ಯದ ಹೆಸರಿನಲ್ಲಿ ₹10.5 ಕೋಟಿ ನೀಡಲಾಗಿದೆ. ಆಡಳಿತ ಮಂಡಳಿ ಸದಸ್ಯರು ಮತ್ತು ಪ್ರಮುಖ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಎಲ್‌ ಆಯಂಡ್ ಟಿ ಕಂಪನಿಯ ಪುರುಷ ಉದ್ಯೋಗಿಗಳ ಸರಾಸರಿ ಸಂಬಳ ₹9.77 ಲಕ್ಷ ಇದೆ. ಮಹಿಳಾ ಉದ್ಯೋಗಿಗಳ ಸರಾಸರಿ ಸಂಬಳ ₹6.76 ಲಕ್ಷವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries