ವಾಷಿಂಗ್ಟನ್: ಅಮೆರಿಕದಲ್ಲಿ 2001ರಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ಆರೋಪಿಗಳ ಜತೆ ಮಾಡಿಕೊಂಡಿರುವ ವಿಚಾರಣಾಪೂರ್ವ ಒಪ್ಪಂದವನ್ನು ರದ್ದುಗೊಳಿಸುವಂತೆ ಸರ್ಕಾರವು ಫೆಡರಲ್ ಮೇಲ್ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ದಾಳಿಯ ಪ್ರಮುಖ ಸಂಚುಕೋರ ಖಾಲಿದ್ ಶೈಖ್ ಮೊಹಮ್ಮದ್ ಮತ್ತು ಇತರ ಇಬ್ಬರು ಆರೋಪಿಗಳು ಹಾಗೂ ಪ್ರಾಸಿಕ್ಯೂಟರ್‌ಗಳ ನಡುವೆ ಈಚೆಗೆ ವಿಚಾರಣಾಪೂರ್ವ ಒಪ್ಪಂದ ಏರ್ಪಟ್ಟಿತ್ತು.
ಇದರಿಂದ ಶೈಖ್ ಹಾಗೂ ಇತರರಿಗೆ ಗಲ್ಲು ಶಿಕ್ಷೆಯಿಂದ ಪಾರಾಗುವ ಅವಕಾಶ ದೊರೆತಿದೆ.
'ಶೈಖ್ ಹಾಗೂ ಇತರ ಇಬ್ಬರು ಸಹ ಆರೋಪಿಗಳ ತಪ್ಪೊಪ್ಪಿಗೆ ಮನವಿ ಸ್ವೀಕರಿಸಿದರೆ, ಅವರನ್ನು ಬಹಿರಂಗವಾಗಿ ವಿಚಾರಣೆಗೆ ಒಳಪಡಿಸುವ ಅವಕಾಶವನ್ನು ಸರ್ಕಾರ ಕಳೆದುಕೊಳ್ಳಲಿದೆ. ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಮತ್ತು ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಘೋರ ಕೃತ್ಯದ ಆರೋಪ ಹೊತ್ತಿರುವ ಮೂವರಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವೂ ತಪ್ಪಲಿದೆ' ಎಂದು ಕೊಲಂಬಿಯಾ ಜಿಲ್ಲಾ ಮೇಲ್ಮನವಿ ನ್ಯಾಯಾಲಯದಲ್ಲಿ ನ್ಯಾಯಾಂಗ ಇಲಾಖೆಯು ಮಂಗಳವಾರ ವಾದಿಸಿದೆ.
ಈ ಮೂವರು ಆರೋಪಿಗಳು ಕಳೆದ ಎರಡು ದಶಕಗಳಿಂದ ಕ್ಯೂಬಾದ ಗ್ವಾಂಟನಾಮೊದಲ್ಲಿರುವ ಅಮೆರಿಕ ಸೇನೆಯ ಜೈಲಿನಲ್ಲಿದ್ದಾರೆ. ಈಗಾಗಲೇ ನಿಗದಿಯಾಗಿರುವಂತೆ ಖಾಲಿದ್ ಶೈಖ್ ತಪ್ಪೊಪ್ಪಿಗೆ ಹೇಳಿಕೆಯನ್ನು ಶುಕ್ರವಾರ ನೀಡಲಿದ್ದಾನೆ. ಇದರ ನಡುವೆಯೇ ಸರ್ಕಾರವು ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದೆ.