ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯೊಳಗೆ 9 ಕಾರ್ಮಿಕರು ಸಿಲುಕಿದ್ದು ಅವರ ರಕ್ಷಣೆಗೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
ಘಟನಾ ಸ್ಥಳದಲ್ಲಿ ರಾಜ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಗಳು ಮತ್ತು ಸೇನೆಯು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿದ್ದು ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡಲಾಗುವುದು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾರ್ಮಿಕರನ್ನು ರಕ್ಷಿಸುವ ಭರವಸೆ ನೀಡಿದ್ದಾರೆ.
ರಕ್ಷಣೆ
ಸೋಮವಾರ ಗಣಿಯಯೊಳಗೆ ದಿಢೀರ್ ನೀರು ಚಿಮ್ಮಿದ ಪರಿಣಾಮ 9 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸರು ವರದಿ ಮಾಡಿದ್ದಾರೆ.
ಗಣಿಯಯೊಳಗೆ ನೀರು ಚಿಮ್ಮಿದ ಪರಿಣಾಮ ಅನಿರೀಕ್ಷಿತವಾಗಿ ಏಕಾಏಕಿ ಪ್ರವಾಹ ಸ್ಥಿತಿ ನಿರ್ಮಾಣವಾಯಿತು, ಕಾರ್ಮಿಕರು ಹೊರಬರದಂತೆ ಆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸಿಲುಕಿರುವ ಕಾರ್ಮಿಕರ ಸಂಖ್ಯೆ 9 ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು 15 ಎಂದು ಹೇಳುತ್ತಿದ್ದಾರೆ. ಆದಾಗ್ಯೂ ಈ ಸಂಖ್ಯೆಯನ್ನು ಅಧಿಕಾರಿಗಳು ದೃಢಪಡಿಸಿಲ್ಲ.