ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಿದೆ. ಫೆ.5ರಂದು ಮತದಾನ ಹಾಗೂ 8ರಂದು ಮತ ಎಣಿಕೆ ನಡೆಯಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.
ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ವೇಳಾಪಟ್ಟಿ ಪ್ರಕಟಿಸಿದರು. ಇದು ಈ ವರ್ಷದ ಮೊದಲ ಚುನಾವಣೆ. ರಾಜೀವ್ ಕುಮಾರ್ ಅವರು ನಡೆಸುತ್ತಿರುವ ಕೊನೆಯ ಚುನಾವಣೆ. ಮುಂದಿನ ತಿಂಗಳು ಅವರು ಕೆಲಸದಿಂದ ನಿವೃತ್ತರಾಗಲಿದ್ದಾರೆ. ಪ್ರಸ್ತುತ ವಿಧಾನಸಭೆಯ ಅವಧಿ ಫೆಬ್ರುವರಿ 23ಕ್ಕೆ ಕೊನೆಗೊಳ್ಳಲಿದೆ.
ದೆಹಲಿಯಲ್ಲಿ 10 ವರ್ಷಗಳಿಂದ ಎಎಪಿ ಅಧಿಕಾರದಲ್ಲಿದೆ. ಬಿಜೆಪಿ 26 ವರ್ಷಗಳಿಂದ ಅಧಿಕಾರದಿಂದ ದೂರ ಇದೆ. ಕಾಂಗ್ರೆಸ್ ಕಳೆದೆರಡು ಚುನಾವಣೆಗಳಲ್ಲಿ ಖಾತೆ ತೆರೆದಿಲ್ಲ. ಎಎಪಿ ಸರ್ಕಾರವನ್ನು ಪುನರಾವರ್ತನೆ ಮಾಡಬೇಕೇ, ಬಿಜೆಪಿಯ ವನವಾಸ ಅಂತ್ಯಗೊಳಿಸಬೇಕೇ ಅಥವಾ ಕಾಂಗ್ರೆಸ್‌ಗೆ ರಾಜಕೀಯ ಪ್ರಸ್ತುತತೆ ನೀಡಬೇಕೇ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.
ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಭವಿಷ್ಯವು ಈ ಫಲಿತಾಂಶದ ಮೇಲೆ ನಿಂತಿದೆ. ಹರಿಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶದ ಬಳಿಕ 'ಇಂಡಿಯಾ' ಗುಂಪಿನಲ್ಲಿ ಭಿನ್ನಮತ ಆರಂಭವಾಗಿದೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಮೈತ್ರಿಕೂಟದಲ್ಲಿ ಒಡಕು ಮತ್ತಷ್ಟು ಹೆಚ್ಚಬಹುದು. ಮೈತ್ರಿಕೂಟದ ನಾಯಕತ್ವವನ್ನು ಪ್ರಾದೇಶಿಕ ಪಕ್ಷಗಳಿಗೆ ಹಸ್ತಾಂತರಿಸುವಂತೆ ಇನ್ನಷ್ಟು ಪಕ್ಷಗಳು ಒತ್ತಡ ಹೇರುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ ಫೆ.1ರಂದು ಮಂಡನೆಯಾಗುವ ಸಂಭವ ಇದೆ. 'ಕೇಂದ್ರ ಬಜೆಟ್‌ನಲ್ಲಿ ದೆಹಲಿಗೆ ಸಂಬಂಧಿ
ಸಿದ ವಿಷಯ ಸೇರಿಸದಂತೆ ಕ್ಯಾಬಿನೆಟ್ ಕಾರ್ಯದರ್ಶಿ ಅವರಿಗೆ ಆಯೋಗ ಪತ್ರ ಬರೆಯಲಿದೆ' ಎಂದು ಕುಮಾರ್ ಅವರು ತಿಳಿಸಿದರು.
ರಾಜಧಾನಿಯ ರಾಜಕೀಯದಲ್ಲಿ ತಮ್ಮ ಭವಿಷ್ಯ ನಿರ್ಧರಿಸುವ ಈ ಚುನಾವಣೆಯು ಕಾಂಗ್ರೆಸ್, ಬಿಜೆಪಿ ಹಾಗೂ ಎಎಪಿಗೆ ನಿರ್ಣಾಯಕ.
ಕಳೆದ ಬಾರಿ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎಎಪಿಯು ಎಲ್ಲ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. 24 ಹೊಸ ಮುಖಗಳಿಗೆ ಮಣೆ ಹಾಕಿದೆ. ಬಿಜೆಪಿ 48 ಕ್ಷೇತ್ರಗಳಿಗೆ ಹಾಗೂ ಬಿಜೆಪಿ 29 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿವೆ.
ಎರಡು ಕ್ಷೇತ್ರಗಳಿಗೆ ಉಪಚುನಾವಣೆ
ಉತ್ತರ ಪ್ರದೇಶದ ಮಿಲ್ಕಿಪುರ ಕ್ಷೇತ್ರದ ಶಾಸಕರಾಗಿದ್ದ ಅವಧೇಶ್ ಪ್ರಸಾದ್ ಅವರು ಲೋಕಸಭಾಗೆ ಆಯ್ಕೆಯಾಗಿದ್ದಾರೆ. ತಮಿಳುನಾಡಿನ ಈರೋಡ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಇವಿಕೆಎಸ್ ಇಳಂಗೋವನ್ ನಿಧನರಾಗಿದ್ದರು. ಈ ಕ್ಷೇತ್ರಗಳಿಗೆ ಫೆ.5ರಂದು ಉಪಚುನಾವಣೆ ನಡೆಯಲಿದೆ.
'ಜಮ್ಮು-ಕಾಶ್ಮೀರದ ಬುದ್ಗಾಮ್ ಮತ್ತು ನಗ್ರೋಟಾದ ಎರಡು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಬಾಕಿಯಿದೆ. ಹವಾಮಾನ ವೈಪರೀತ್ಯದಿಂದ ಸದ್ಯ ಚುನಾವಣೆ ನಡೆಸಲು ಸಾಧ್ಯವಿಲ್ಲ' ಎಂದು ರಾಜೀವ್ ಕುಮಾರ್ ತಿಳಿಸಿದರು.