ನವದೆಹಲಿ: 'ಯಾವುದೇ ಸಂಶೋಧನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳದಿದ್ದರೆ ಅವುಗಳು ಪ್ರಾಮುಖ್ಯತೆ ಕಳೆದುಕೊಳ್ಳಲಿವೆ. ಹೀಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದು ಹಾಗೂ ಖಾಸಗಿ ಪಾಲುದಾರಿಕೆಯನ್ನು ಉತ್ತೇಜಿಸುವ ಅಗತ್ಯವಿದೆ' ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸುಬ್ರತೋ ಮುಖರ್ಜಿ ಸ್ಮಾರಕ 21ನೇ ವಿಚಾರ ಸಂಕಿರಣದಲ್ಲಿ 'ಏರೋಸ್ಪೇಸ್‌ನಲ್ಲಿ ಆತ್ಮನಿರ್ಭರ ಭಾರತ: ಮುಂದಿನ ದಾರಿ' ಎಂಬ ವಿಷಯ ಕುರಿತು ಮಾತನಾಡಿದ ಅವರು, ಭಾರತೀಯ ವಾಯು ಸೇನೆಗೆ ತಲುಪಬೇಕಿದ್ದ ತೇಜಸ್ ಯುದ್ಧ ವಿಮಾನಗಳ ಮೊದಲ ತಂಡ ವಿಳಂಬವಾಗಿರುವುದನ್ನು ಪ್ರಸ್ತಾಪಿಸಿದ್ದಾರೆ.
'ಸಾಮರ್ಥ್ಯ ವೃದ್ಧಿಯು ಸದ್ಯದ ಅಗತ್ಯ. ನಮಗೆ ಎಲ್ಲಾ ಸಮಯದಲ್ಲೂ ವಿಮಾನಗಳ ಬೇಡಿಕೆ ಇಲ್ಲದಿರಬಹುದು. ಆದರೆ ಯಾವಾಗ ಬೇಕೋ ಆಗ ಅದನ್ನು ತ್ವರಿತವಾಗಿ ನೀಡಲು ತಯಾರಿಕಾ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ತಂತ್ರಜ್ಞರ ನೇಮಕದೊಂದಿಗೆ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.
'ವಾಯು ಸೇನೆಯಲ್ಲಿ ತೇಜಸ್ ಪ್ರವೇಶ 2016ರಿಂದ ಆರಂಭವಾಯಿತು. ಆದರೆ ಈ ವಿಮಾನವು ಪರಿಚಯಗೊಂಡಿದ್ದು 1984ರಲ್ಲಿ. ಮೊದಲ ಹಾರಾಟ ನಡೆಸಿದ್ದು 17 ವರ್ಷಗಳ ನಂತರ 2001ರಲ್ಲಿ. ಆದರೆ ಇದು ಪೂರ್ಣಪ್ರಮಾಣದಲ್ಲಿ ತಯಾರಾಗಿ ಸೇನೆ ಸೇರಿದ್ದು 16 ವರ್ಷಗಳ ನಂತರ ಅಂದರೆ 2016ರಲ್ಲಿ. ನಾವು ಈಗ 2024ರಲ್ಲಿದ್ದೇವೆ. ಆದರೆ ಮೊದಲ ತಂಡದಲ್ಲಿ ಸೇನೆ ತಲುಪಬೇಕಾಗಿದ್ದ 40 ವಿಮಾನಗಳು ಈವರೆಗೂ ಕೈಸೇರಿಲ್ಲ. ನಮಗೆ ಸ್ಪರ್ಧೆ ಇರಬೇಕು. ಜತೆಗೆ ಹಲವು ಮಾರಾಟ ಮೂಲಗಳ ಮಾಹಿತಿಯೂ ಇರಬೇಕು. ಇಲ್ಲವಾದಲ್ಲಿ ನಮಗೆ ದೊರೆತ ಗುತ್ತಿಗೆಗಳು ರದ್ದಾಗುವ ಅಪಾಯವೂ ಇದೆ' ಎಂದಿದ್ದಾರೆ.
ಲಘು ಯುದ್ಧ ವಿಮಾನ ತಯಾರಿಕೆಯು 1980ರಲ್ಲಿ ಆರಂಭವಾಯಿತು. ಮಿಗ್-21 ಹಾಗೂ ಸು-7ಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ರಮ ಇದಾಗಿತ್ತು. 2016ರಲ್ಲಿ ವಾಯು ಸೇನೆಯನ್ನು ಏರ್‌ಫೋರ್ಸ್ ಸಂಖ್ಯೆ 45 ಸ್ಕ್ವಾಡ್ರನ್- ದಿ ಫ್ಲೈಯಿಂಗ್ ಡ್ಯಾಗರ್ಸ್, ನಂತರ ಸಂಖ್ಯೆ 18ರ ಸ್ಕ್ವಾಡ್ರನ್- ದಿ ಫ್ಲೈಯಿಂಗ್ ಬುಲೆಟ್ಸ್‌ಗೆ ವಿಮಾನಗಳು ಪೂರೈಕೆಯಾಗಿದ್ದವು.
'ಸಂಶೋಧನೆ ಹಾಗೂ ಅಭಿವೃದ್ಧಿಗೆ ಶೇ 5ರಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಇದು ಶೇ 15ರಷ್ಟಾದರೂ ಇರಬೇಕು. ಈ ಅನುದಾನ ಖಾಸಗಿಯವರಿಗೂ ಲಭ್ಯವಾಗುವಂತಿರಬೇಕು. ಖಾಸಗಿಯವರ ಪಾಲುದಾರಿಕೆ ಹೆಚ್ಚಿಸುವಂತ ಯೋಜನೆಗಳನ್ನೂ ಜಾರಿಗೆ ತರಬೇಕು. ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಿದೆ' ಎಂದು ಎ.ಪಿ. ಸಿಂಗ್ ಹೇಳಿದ್ದಾರೆ.
'ಚೀನಾ ಈಗಾಗಲೇ 6ನೇ ತಲೆಮಾರಿನ ಯುದ್ಧ ವಿಮಾನದ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಯುದ್ಧ ವಿಮಾನಗಳು ತ್ವರಿತಗತಿಯಲ್ಲಿ ಆಧುನೀಕರಣಗೊಳ್ಳುತ್ತಿವೆ. ಚೀನಾದ ವಿಷಯದಲ್ಲಿ ಸಂಖ್ಯೆ ಮಾತ್ರವಲ್ಲ, ತಂತ್ರಜ್ಞಾನವೂ ವೇಗ ಪಡೆದುಕೊಂಡಿದೆ' ಎಂದಿದ್ದಾರೆ.
ಅಮೆರಿಕ ನಂತರದಲ್ಲಿ ಸ್ಟೀಲ್ತ್ ಜೆ-20 ಹಾಗೂ ಜೆ-35 ಜೆಟ್‌ಗಳನ್ನು ಹೊಂದಿರುವ 2ನೇ ರಾಷ್ಟ್ರ ಚೀನಾ ಆಗಿದೆ. ಈ ಬೆಳವಣಿಗೆಗೆ ಚೀನಾ ಅತ್ಯಲ್ಪ ಸಮಯ ತೆಗೆದುಕೊಂಡಿದೆ.