ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ, ಯಮುನಾ ಹಾಗೂ ಪೌರಾಣಿಕ ಸರಸ್ವತಿ ನದಿ ಸಂಗಮದಲ್ಲಿ ಇದೇ 13ರಿಂದ ನಡೆಯಲಿರುವ ಮಹಾಕುಂಭ ಮೇಳಕ್ಕೆ ಗಣ್ಯರು, ಅತಿ ಗಣ್ಯರು, ಸಾಧು ಸಂತರು ಪಾಲ್ಗೊಳ್ಳುತ್ತಿದ್ದಾರೆ. ಮೇಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಕಲ್ಪವಾಸ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಹಾಗೂ ಬಿಹಾರದ ವಿವಿಧ ಗ್ರಾಮಗಳಿಂದ ಈ ಪುರುಷ ಹಾಗೂ ಮಹಿಳೆಯರನ್ನು ಒಳಗೊಂಡ ಕಲ್ಪವಾಸಿಗಳು ತಿಂಗಳ ಕಾಲ ಈ ಸಂಗಮದ ದಂಡೆಯಲ್ಲಿ ಬೀಡು ಬಿಡುತ್ತಾರೆ. ಮೈಕೊರೆವ ಚಳಿಯಲ್ಲೇ ದಿನನಿತ್ಯದ ಸ್ನಾನ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಗಂಗೆಯಲ್ಲಿ ಪ್ರತಿನಿತ್ಯ ಮಿಂದೇಳಲಿದ್ದಾರೆ. ವಿವಿಧ ಸ್ವಾಮೀಜಿಗಳ ಪ್ರವಚನ, ಭಜನೆ, ಕೀರ್ತನೆಗಳಲ್ಲಿ ಇವರು ಪಾಲ್ಗೊಳ್ಳುತ್ತಾರೆ.
ಇವರ ಉಡುಗೆ, ತೊಡುಗೆ ಭಿನ್ನ. ತಿನಿಸು, ಬಟ್ಟೆ ಹಾಗೂ ದಿನನಿತ್ಯ ಬಳಕೆಯ ವಸ್ತುಗಳಿರುವ ಚೀಲವನ್ನು ತಲೆ ಮೇಲೆ ಹೊತ್ತು ಗಂಗೆಯ ದಡಕ್ಕೆ ಬರುತ್ತಾರೆ. ತಮ್ಮೊಂದಿಗೆ ಮರ ಹಾಗೂ ಬಿದಿರಿನಿಂದ ತಯಾರಿಸಿದ ಅಡುಗೆ ಸಿದ್ಧಪಡಿಸುವ ಸಾಮಗ್ರಿಗಳು ತರುತ್ತಾರೆ. ತಾವೇ ಟೆಂಟ್‌ಗಳನ್ನು ನಿರ್ಮಿಸಿಕೊಳ್ಳುತ್ತಾರೆ.
ಇವರನ್ನು ನೋಡುವ ಸಲುವಾಗಿಯೇ ಬಹಳಷ್ಟು ಶ್ರೀಮಂತರು ಹಾಗೂ ಪ್ರಮುಖ ವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದಾರೆ. ಅಂಥವರಲ್ಲಿ ಐಫೋನ್ ತಯಾರಿಸುವ ಅಮೆರಿಕದ ಆಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ. ಸ್ಟೀವ್ ಜಾಬ್ಸ್ ಪತ್ನಿ ಲ್ಯೂರೆನ್ ಪೊವೆಲ್ ಜಾಬ್ಸ್ ಕೂಡಾ ಒಬ್ಬರು.
ಜ. 13ರಂದೇ ಪ್ರಯಾಗ್‌ರಾಜ್‌ಗೆ ಬರಲಿರುವ ಇವರು ಕ್ಯಾಂಪ್‌ನಲ್ಲಿ ತಂಗಲಿದ್ದಾರೆ. ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ಅವರ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾಕುಂಭದಲ್ಲಿ ಜ. 29ರವರೆಗೂ ಲ್ಯೂರೆನ್ ಇರಲಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಪುರಾಣದಂತೆ ಬಹಳ ಹಿಂದಿನಿಂದಲೂ ಕಲ್ಪಾವಾಸ ಆಚರಿಸಿಕೊಂಡು ಬರಲಾಗುತ್ತಿದೆ. ಕಲ್ಪಾ ಎಂದರೆ ದೀರ್ಘ, ವಾಸ ಎಂದರೆ ಬದುಕುವುದು ಎಂದರ್ಥ. ಮಾಘ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಇದರಲ್ಲಿ ಸೂರ್ಯೋದಯಕ್ಕೂ ಪೂರ್ವದಲ್ಲಿ ನದಿಯಲ್ಲಿ ಸ್ನಾನ, ನಂತರ ಧ್ಯಾನ, ಪೂಜೆ ಹಾಗೂ ಇತರ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವುದೂ ಸೇರಿದೆ.