ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುವೆ ಎಂದಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂಢಿ ಅವರಿಗೆ ಕಾಂಗ್ರೆಸ್ ಹಾಗೂ ಎಎಪಿ ತಿರುಗೇಟು ನೀಡಿವೆ.
ಮುಖ್ಯಮಂತ್ರಿ ಅತಿಶಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಾಂಬಾ ಸ್ಪರ್ಧಿಸಲಿರುವ ಕಲ್ಕಾಜಿಯಲ್ಲಿ ರಮೇಶ್ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಶನಿವಾರ ಘೋಷಿಸಿದೆ.
ಇದನ್ನು 'ನೀಚ ಮನಸ್ಥಿತಿ' ಎಂದು ಖಂಡಿಸಿರುವ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್, ಬಿಜೆಪಿ ಅಭ್ಯರ್ಥಿಯ ಕ್ಷಮೆ ಯಾಚನೆಗೆ ಒತ್ತಾಯಿಸಿದ್ದಾರೆ.
'ರಮೇಶ್ ಹೇಳಿಕೆ ಮೂಲಕ, ಬಿಜೆಪಿಯವರು ಮಹಿಳೆಯರ ಕುರಿತು ಯಾವ ಮನಸ್ಥಿತಿ ಹೊಂದಿದ್ದಾರೆ ಎಂಬುದು ಮುನ್ನಲೆಗೆ ಬಂದಿದೆ. ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ನೀಡಿರುವ ಹೇಳಿಕೆ ನಾಚಿಕೆಗೇಡು ಎಂಬುದಷ್ಟೇ ಅಲ್ಲ. ಮಹಿಳೆಯವರ ಬಗ್ಗೆ ಬಿಜೆಪಿಗರು ಹೊಂದಿರುವ ಸಂಕುಚಿತ ಮನೋಭಾವನೆಯನ್ನು ಜಾಹೀರು ಮಾಡಿದೆ' ಎಂದಿದ್ದಾರೆ.
Delhi Polls | ಪ್ರಿಯಾಂಕಾ ಗಾಂಧಿ ಕೆನ್ನೆಯಂಥ ರಸ್ತೆ ನಿರ್ಮಿಸುವೆ: BJP ಅಭ್ಯರ್ಥಿಲೋಕಸಭೆಯಲ್ಲಿ ಡ್ಯಾನಿಶ್ ಅಲಿಯನ್ನು ನಿಂದಿಸಿದ ಬಿಜೆಪಿ ಸಂಸದ ರಮೇಶ್ಮುಂದುವರಿದು, 'ಬಿಜೆಪಿಯ ನಾಯಕಿಯರಾಗಲೀ, ಅದರ ಅಧ್ಯಕ್ಷ ಜೆ.ಪಿ.ನಡ್ಡಾ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಾಗಲೀ ಇಂತಹ ಅಸಭ್ಯ ಭಾಷೆಯ ಬಗ್ಗೆ ಮಾತನಾಡುವರೇ? ಮಹಿಳೆಯರಿಗೆ ಅಗೌರವ ತೋರುವ ಸಂಸ್ಕೃತಿ ಬಿಜೆಪಿಗರಿಗೆ ರಕ್ತಗತವಾಗಿದೆ ಎಂಬುದು ಸ್ಪಷ್ಟವಾಗಿದೆ. ನಾಯಕತ್ವ ವಹಿಸಿರುವವರೇ ಇಂತಹ ಮನಸ್ಥಿತಿ ಹೊಂದಿರುವಾಗ, ಇತರರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಇಂತಹ ನೀಚ ಮನಸ್ಥಿತಿಯನ್ನು ದೇಶ ಖಂಡಿಸುತ್ತದೆ. ಇದಕ್ಕಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿದ್ದಾರೆ.
ಎಐಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ರಮೇಶ್ ವಿಡಿಯೊವನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಇಂತಹ ಉದ್ಧಟತನವು ಈ ದುಷ್ಟ ವ್ಯಕ್ತಿಯ ಮನಸ್ಥಿತಿಯನ್ನಷ್ಟೇ ಅಲ್ಲ, ಅವರ ಪಕ್ಷದ ಮುಖ್ಯಸ್ಥರ ಮುಖವನ್ನೂ ಪ್ರದರ್ಶಿಸುತ್ತಿದೆ. ಬಿಜೆಪಿಯ ಇಂತಹ ನಾಯಕರರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೌಲ್ಯಗಳನ್ನು ಅಡಿಯಿಂದ ಮುಡಿಯವರೆಗೂ ಕಾಣಬಹುದು' ಎಂದು ಕುಟುಕಿದ್ದಾರೆ.
ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್, 'ಬಿಜೆಪಿಯು ಮಹಿಳಾ ವಿರೋಧಿಯಾಗಿದೆ. ಸಂಸತ್ತಿನಲ್ಲಿ ಸಹ ಸಂಸದರ ಬಗ್ಗೆ ಅಶ್ಲೀಲ ಪದ ಬಳಸಿದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇದು ಆ ಪಕ್ಷದ ನಿಜವಾದ ಮುಖ' ಎಂದಿದ್ದಾರೆ.
ಮುಂದುವರಿದು, 'ಬಿಜೆಪಿಯ ನಾಯಕಿಯರು, ಮಹಿಳಾಭಿವೃದ್ಧಿ ಸಚಿವ ನಡ್ಡಾ ಅಥವಾ ಪ್ರಧಾನಿ ಅವರು ಇಂತಹ ಅಸಭ್ಯ ಭಾಷೆ ಮತ್ತು ಮನಸ್ಥಿತಿ ಬಗ್ಗೆ ಹೇಳಿಕೆ ನೀಡುವರೇ?' ಎಂದು ಕೇಳಿದ್ದಾರೆ. ಹಾಗೆಯೇ, 'ವಾಸ್ತವದಲ್ಲಿ, ಮಂಗಳಸೂತ್ರದಂತಹ ಪದ ಬಳಸಿದ್ದ ಮೋದಿ ಅವರೇ ಮಹಿಳಾ ವಿರೋಧಿ ಭಾಷೆ ಹಾಗೂ ಚಿಂತನೆಯ ಪಿತಾಮಹ. ಹೀಗಿರುವಾಗ, ಅವರ ಕಡೆಯವರು ಇನ್ನೆಂತಹ ಹೇಳಿಕೆಗಳನ್ನು ನೀಡಲು ಸಾಧ್ಯ?' ಎಂದು ಕೇಳಿದ್ದಾರೆ. ಆ ಮೂಲಕ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿರುವ ಅವರು, ರಮೇಶ್ ಹೇಳಿಕೆಗೆ ಕ್ಷಮೆ ಕೋರುವಂತೆ ಒತ್ತಾಯಿಸಿದ್ದಾರೆ.
'ಬಿಜೆಪಿ ನಾಯಕ ರಮೇಶ್, ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಅತ್ಯಂತ ಕೆಟ್ಟ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಎಎಪಿ ನಾಯಕರು ಪ್ರತಿಭಟಿಸುತ್ತಿದ್ದಾರೆ' ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
-ಸೌರಭ್ ಭಾರದ್ವಾಜ್, ದೆಹಲಿ ಸಚಿವತಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ರಮೇಶ್ ಬಿಧೂಡಿ ವಿರುದ್ಧ ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಒಂದೇ ಒಂದು ಶಬ್ದ ಹೇಳುವ ಧೈರ್ಯ ತೋರಿಲ್ಲ. ಸಂದೀಪ್ ದೀಕ್ಷಿತ್ ಹಾಗೂ ಬಿಜೆಪಿ ನಡುವಿನ ಸಂಬಂಧ ಎಷ್ಟೊಂದು ಗಟ್ಟಿ ಇರಬಹುದು ಎಂಬುದು ಇದರಿಂದ ಅರ್ಥವಾಗುತ್ತದೆ.
'ಲಾಲು ಧಾಟಿಯಲ್ಲಿ ಹೇಳಿಕೆ ನೀಡಿದ್ದೇನೆ'
ರಮೇಶ್ ಅವರು ನೀಡಿರುವ ಹೇಳಿಕೆ ಸಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಅವರು, 'ಬಿಹಾರದಲ್ಲಿ ಹೇಮಾ ಮಾಲಿನಿ ಅವರ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸುವುದಾಗಿ ಲಾಲು ಪ್ರಸಾದ್ ಅವರು ಹೇಳಿದ್ದರು. ಅದು ಸುಳ್ಳು. ಅವರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ. ಓಖ್ಲಾ ಹಾಗೂ ಸಂಗಮ್ ವಿಹಾರದಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲಿಯೂ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸುತ್ತೇವೆ' ಎಂದು ಕಲ್ಕಾಜಿಯಲ್ಲಿ ನಡೆಸಿದ ಸಭೆಯಲ್ಲಿ ಹೇಳಿದ್ದರು.
ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅವರು, '30 ವರ್ಷಗಳ ಹಿಂದೆ ಲಾಲು ಪ್ರಸಾದ್ ಅವರು ಮಾತನಾಡಿದ್ದ ಧಾಟಿಯಲ್ಲಿ ಹೇಳಿಕೆ ನೀಡಿದ್ದೇನೆ. ಆಗ ತಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ಲಾಲು ಹೇಳಿಕೆ ಬಗ್ಗೆ ಕಾಂಗ್ರೆಸ್ ಮೌನ ವಹಿಸಿತ್ತು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ' ಎಂದಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ.