ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಇವೆಲ್ಲವೂ ನಡೆದಿರುವುದು ಜವಹರ್‌ಲಾಲ್ ನೆಹರೂ ಅವರ ಅಧಿಕಾರಾವಧಿಯಲ್ಲಿ ಎಂದು ತಿರುಗೇಟು ನೀಡಿದೆ.
'ಚೀನಾ ಭಾರತದ ಭೂಮಿಯನ್ನು ಆಕ್ರಮಿಸುತ್ತಲೇ ಇದೆ. ನರೇಂದ್ರ ಮೋದಿ ಅವರು ಕ್ಲೀನ್ ಚಿಟ್ ನೀಡುತ್ತಲೇ ಇದ್ದಾರೆ' ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ಬಿಜೆಪಿ ಈ ಹೇಳಿಕೆ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, 'ನೆಹರೂ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇವೆಲ್ಲ ನಡೆದಿದ್ದರೂ, ಭಾರತದ ಭೂಭಾಗವನ್ನು ಚೀನಾ ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡುವ ಅಪ್ರಾಮಾಣಿಕತೆ ಕಾಂಗ್ರೆಸ್‌ಗೆ ಇದೆ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನೆಹರೂ ಅವರು ಮಾಡಿರುವ ದ್ರೋಹಕ್ಕೆ ಪ್ರಧಾನಿ ಮೋದಿ ಅವರನ್ನು ದೂಷಿಸುತ್ತಿದ್ದಾರೆ. ರಾಹುಲ್ ಗಾಂಧಿ ಬೇರೆ ರೀತಿಯಲ್ಲಿ ಯೋಚಿಸಿದರೂ ಇಂತಹ ಸುಳ್ಳುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ.