ಬೋಧಪುರ: ಜೋಧಪುರದಿಂದ ಬೆಂಗಳೂರಿಗೆ ಮಂಗಳವಾರ ಬೆಳಿಗ್ಗೆ ಹೊರಡಲಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಪ್ಯಾನಿಕ್ ಬಟನ್ (ಅಪಾಯ ಸೂಚನಾ ಒತ್ತುಗುಂಡಿ) ಒತ್ತಿದ್ದು ಕೆಲ ಕಾಲ ಗೊಂದಲ, ಆತಂಕಕ್ಕೆ ಕಾರಣವಾಗಿತ್ತು.
ವಿಮಾನವು (6ಇ-603) ರನ್‌ವೇಗೆ ಸಾಗಿ, ಬೆಳಿಗ್ಗೆ 10.05ಕ್ಕೆ ಟೇಕಾಫ್ ಆಗಬೇಕಿತ್ತು.
ಈ ಬೆಳವಣಿಗೆ ಬೆನ್ನಲ್ಲೇ, ಸ್ಥಳಕ್ಕೆ ದೌಡಾಯಿಸಿದ ವಿಮಾನನಿಲ್ದಾಣ ಸಿಬ್ಬಂದಿ, ಪ್ಯಾನಿಕ್ ಬಟನ್ ಒತ್ತಿದ್ದ ಪ್ರಯಾಣಿಕ ಸಿರಾಜ್ ಕಿದ್ವಾಯಿ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದರು.
'ಸಿರಾಜ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರ ಈ ಕೃತ್ಯದಲ್ಲಿ ಯಾವುದೇ ಶಂಕಾಸ್ಪದವೇನೂ ಕಂಡುಬರದ ಕಾರಣ ಅವರನ್ನು ಬಿಟ್ಟು ಕಳಿಸಲಾಯಿತು. ವಿಮಾನವು 20 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತು' ಎಂದು ವಿಮಾನನಿಲ್ದಾಣ ಠಾಣೆ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ತಿಳಿಸಿದ್ದಾರೆ.
ಸಿರಾಜ್, ಬ್ಯಾಂಕ್ ಅಧಿಕಾರಿ. ತಾವು ಕುಳಿತಿದ್ದ ಸೀಟಿನ ಬಳಿಯೇ ಇದ್ದ ಪ್ಯಾನಿಕ್ ಬಟನ್‌ಅನ್ನು ಆಕಸ್ಮಿಕವಾಗಿ ಅವರು ಒತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಸಿರಾಜ್ ಈ ವಿಮಾನ ತಪ್ಪಿಸಿಕೊಂಡರು.