ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಮಾರಕ ನಿರ್ಮಿಸಲು ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಸ್ಥಳ ಅಂತಿಮಗೊಳಿಸಲು ಸಿಂಗ್ ಅವರ ಕುಟುಂಬ ಸದಸ್ಯರ ಜೊತೆಗೂ ಸರ್ಕಾರ ಸಂಪರ್ಕದಲ್ಲಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆಯ ಮೂಲಗಳ ಪ್ರಕಾರ, ಸ್ಮಾರಕ ನಿರ್ಮಿಸಲು ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜಯಗಾಂಧಿ ಸ್ಮಾರಕದ ಆಸುಪಾಸು ಇರುವ ಭೂಮಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಕೆಲವೊಂದು ಸ್ಥಳಗಳನ್ನು ಗುರುತಿಸಿದ್ದಾರೆ.
ಸ್ಥಳವನ್ನು ಅಂತಿಮಗೊಳಿಸಲು 3-4 ಆಯ್ಕೆ ಇದ್ದು, ಕುಟುಂಬದವರ ಜೊತೆ ಚರ್ಚೆ ನಡೆದಿದೆ. ಯಾವುದೇ ಸ್ಥಳ ಅಂತಿಮಗೊಳಿಸಿಲ್ಲ. ನಿಗದಿತ ಭೂಮಿ ಹಂಚಿಕೆಗೂ ಮೊದಲು ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರ ಟ್ರಸ್ಟ್ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ.