ಮುಂಬೈ: ಮಣ್ಣಿನಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿ, ಬೆಳೆಗಳಿಗೆ ಅನುಕೂಲಕಾರಿಯಾಗಿರುವ ಪೋಷಕಾಂಶಗಳನ್ನು ಉತ್ಪಾದಿಸಬಲ್ಲ ಬ್ಯಾಕ್ಟೀರಿಯಾವನ್ನು ಐಐಟಿ ಬಾಂಬೆ ಸಂಶೋಧನಾರ್ಥಿಗಳು ಪತ್ತೆಹಚ್ಚಿದ್ದಾರೆ.
'ಕೀಟನಾಶಕಗಳಲ್ಲಿ ಬಳಸಲಾಗುವ ಕೆಲವು ರಾಸಾಯನಿಕಗಳು ಮಣ್ಣಿನಲ್ಲಿ ಸೇರಿ, ಸಸ್ಯಗಳ ಬೆಳವಣಿಗೆಗೆ ಅಡ್ಡಿಯುಂಟು ಮಾಡಲಿವೆ.
ಇದರಿಂದ ಇಳುವರಿ ಕಡಿಮೆಯಾಗುವುದಲ್ಲದೆ, ಈ ವಿಷಕಾರಿ ಅಂಶವು ಮಾನವನ ದೇಹವನ್ನೂ ಸೇರುವ ಅಪಾಯವಿರಲಿದೆ. ಇದೀಗ ಪತ್ತೆಹಚ್ಚಲಾಗಿರುವ ಬ್ಯಾಕ್ಟೀರಿಯಾಗಳು ಇಂತಹ ವಿಷಕಾರಕಗಳನ್ನು ವಿಘಟಿಸಿ, ಸಸ್ಯಗಳ ಬೆಳವಣಿಗೆಗೆ ಅನುಕೂಲಕಾರಿಯಾಗಿರುವ ಪೋಷಕಾಂಶಗಳನ್ನು ಉತ್ಪಾದಿಸಲಿವೆ' ಎಂದು ಐಐಟಿ ಬಾಂಬೆಯ ಜೈವಿಕ ವಿಜ್ಞಾನ ಹಾಗೂ ಬಯೊಎಂಜಿನಿಯರಿಂಗ್ ವಿಭಾಗದ ಪ್ರೊ. ಪ್ರಶಾಂತ್ ಫಾಲೆ ತಿಳಿಸಿದ್ದಾರೆ.
ನೈಸರ್ಗಿಕ ಸಂಪನ್ಮೂಲಗಳ ಮಾಲಿನ್ಯವನ್ನು ನಿಯಂತ್ರಿಸಲು, ವಿಷಕಾರಿ ರಾಸಾಯನಿಕಗಳು ಹಾಗೂ ಮಾಲಿನ್ಯಕಾರಕಗಳನ್ನು ತಿನ್ನುವ ಬ್ಯಾಕ್ಟೀರಿಯಾಗಳ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ ಎಂದು ಐಐಟಿ ಬಾಂಬೆ ಪ್ರಕಟಣೆಯಲ್ಲಿ ತಿಳಿಸಿದೆ.