ಲಖನೌ: ಮಹಾಕುಂಭಮೇಳದ ಸಮಯದಲ್ಲಿ ಮುಸ್ಲಿಮರ ಸಾಮೂಹಿಕ ಮತಾಂತರ ನಡೆಯುತ್ತದೆ ಎಂಬ ಆತಂಕ ವ್ಯಕ್ತಪಡಿಸಿರುವ ಹಿರಿಯ ಮೌಲ್ವಿಯೊಬ್ಬರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರುಮಹಾಕುಂಭಕ್ಕೆ ಭೇಟಿ ನೀಡದಂತೆ ಇತ್ತೀಚೆಗೆ ಮುಸ್ಲಿಮರಿಗೆ ಸಲಹೆ ನೀಡಿ ಗಮನ ಸೆಳೆದಿದ್ದರು.
ಈಗ ಕುಂಭಮೇಳದ ಸಂದರ್ಭದಲ್ಲಿ ನೂರಾರು ಮುಸ್ಲಿಮರನ್ನು ಮತಾಂತರ ಮಾಡುವ ಯೋಜನೆಗಳನ್ನು ವಿಫಲಗೊಳಿಸುವಂತೆ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮತಾಂತರದ ಬಗ್ಗೆ ನಂಬಲರ್ಹ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿದೆ. ಜವಾಬ್ದಾರಿಯುತ ನಾಗರಿಕನಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಈಗ ಅದನ್ನು ನಿಲ್ಲಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಅಖಾರ ಪರಿಷತ್ ಮತ್ತು ನಾಗಾ ಸಾಧುಗಳು ಸಭೆ ನಡೆಸಿದ್ದು, ಕುಂಭಮೇಳದ ಸಂದರ್ಭ ಮುಸ್ಲಿಮರು ಅಂಗಡಿಗಳನ್ನು ಇಡುವುದನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಯಾವುದೇ ತೊಂದರೆ ತಪ್ಪಿಸಲು ಮುಸ್ಲಿಮರಿಗೆ ಮಹಾಕುಂಭಕ್ಕೆ ಹೋಗದಂತೆ ನಾನು ಸಲಹೆ ನೀಡಿದ್ದೇನೆ ಎಂದೂ ಹೇಳಿದ್ದಾರೆ.
ಹಿಂದೂಗಳ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಮುಸ್ಲಿಮರು ಚರ್ಚೆಯ ಕೇಂದ್ರವಾಗಿರುವುದು ಇದೇ ಮೊದಲು ಎಂದು ಜಮಿಯತ್ ಉಲಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾನೂನು ಸಲಹೆಗಾರ ಮೌಲಾನಾ ಕಾಬ್ ರಶೀದಿ ಹೇಳಿದ್ದಾರೆ.
ಸನಾತನ ಧರ್ಮದ ನಿಜವಾದ ಅನುಯಾಯಿಗಳೆಂದು ಸಾಬೀತು ಮಾಡಲು ಹಿಂದೂಗಳ ಅಂಗಡಿಗಳಿಂದ ಮಾತ್ರ ಮಹಾಕುಂಭಕ್ಕಾಗಿ ಸರಕುಗಳನ್ನು ಖರೀದಿಸಿ ಎಂದು ಕಳೆದ ವರ್ಷ ಅಖಿಲ ಭಾರತೀಯ ಅಖಾಡ ಪರಿಷತ್ತು (ಎಬಿಎಪಿ) ಕರೆ ನೀಡಿತ್ತು.
ಪ್ರಯಾಗರಾಜ್‌ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭಮೇಳ ಆಯೋಜಿಸಲಾಗಿದೆ.