ಚೆನ್ನೈ: ವೇದಾಂತ ಮಾಲೀಕತ್ವದ ಕಂಪನಿಗೆ ನೀಡಿರುವ ಟಂಗ್‌ಸ್ಟನ್ ಗಣಿಗಾರಿಕೆ ಪರವಾನಗಿ ರದ್ದು ಮಾಡಬೇಕೆಂದು ಆಗ್ರಹಿಸಿ ಸಾವಿರಾರು ರೈತರು ಮತ್ತು ಗ್ರಾಮಸ್ಥರು ಮೇಲೂರು ತಾಲ್ಲೂಕಿನಿಂದ ಮದುರೈವರೆಗೆ (25 ಕಿ.ಮೀ) ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಟಂಗ್‌ಸ್ಟನ್ ವಲಯ ಎಂದು ವರ್ಗೀಕರಿಸಿರುವ 48 ಹಳ್ಳಿಗಳನ್ನು ರಾಜ್ಯ ಸರ್ಕಾರವು ಸಂರಕ್ಷಿತ ಕೃಷಿ ವಲಯಗಳೆಂದು ಘೋಷಿಸಬೇಕು.
ಈ ಮೂಲಕ ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸುಮಾರು ಹತ್ತು ಸಾವಿರ ರೈತರು ಬೆಳಿಗ್ಗೆ ಮೇಲೂರು ತಾಲ್ಲೂಕಿನ ನರಸಿಂಗಂಪಟ್ಟಿಯಿಂದ ಕಾರು, ಬೈಕ್, ಬಸ್, ಲಾರಿ ಮತ್ತು ಪಾದಯಾತ್ರೆ ಮೂಲಕ ಮೆರವಣಿಗೆ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಮದುರೈನ ತಲ್ಲಾಕುಲಂಗೆ ತಲುಪಿದರು. ಕೆಲ ಪ್ರತಿಭಟನಕಾರರನ್ನು ದಾರಿ ಮಧ್ಯೆಯೇ ಪೊಲೀಸರು ತಡೆದು ವಶಕ್ಕೆ ಪಡೆದರು. ಹಲವು ಪ್ರತಿಭಟನಕಾರರು ನಗರವನ್ನು ತಲುಪುವಲ್ಲಿ ಯಶಸ್ವಿಯಾಗಿದರು.
ಗಣಿಗಾರಿಕೆಗೆ ಉದ್ದೇಶಿಸಲಾಗಿರುವ ಪ್ರದೇಶವು ತಮಿಳುನಾಡಿನ ಮೊದಲ ಜೀವವೈವಿಧ್ಯ ಪ್ರದೇಶವೆಂದು ಗುರುತಿಸಿರುವ ಆರಿಟಾಪಟ್ಟಿ ಸಮೀಪ ಇದೆ. ಹೀಗಾಗಿ ಯೋಜನೆಯನ್ನು ರದ್ದು ಮಾಡಬೇಕು ಎಂದು ಕೆಲವರು ಆಗ್ರಹಿಸಿದರು.
ಕೇಂದ್ರ ಗಣಿಗಾರಿಕೆ ಇಲಾಖೆಯು ಟಂಗ್‌ಸ್ಟನ್ ಗಣಿ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಗೆ (ಜಿಎಸ್‌ಐ) ಸೂಚಿಸಿದ ಬೆನ್ನಲ್ಲೇ ಈ ಬೃಹತ್ ಪ್ರತಿಭಟನೆ ನಡೆಯಿತು.