ಬುಲ್ಧಾನ: ಮಹಾರಾಷ್ಟ್ರದಲ್ಲಿ ವಿಚಿತ್ರ ಆರೋಗ್ಯ ಸಮಸ್ಯೆಯೊಂದು ಜನರನ್ನು ಕಾಡುತ್ತಿದೆ. ಬುಲ್ಧಾನ ಜಿಲ್ಲೆಯ ಗ್ರಾಮವೊಂದರಲ್ಲಿ ಈ ವಿಚಿತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಜನತೆ ಏಕಾ ಏಕಿ ಕೂದಲು ಉದುರುವಿಕೆಯಿಂದ ಕಂಗಾಲಾಗಿದ್ದಾರೆ.
ಕೆಲವೇ ದಿನಗಳಲ್ಲಿ ಕೂದಲು ಉದುರಿ ಬೊಕ್ಕತಲೆಯ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳೂ ಈ ಬಗ್ಗೆ ತಲೆ ಕೆಡಿಸಿಕೊಂಡು ನೀರಿನ ಮಾಲಿನ್ಯ ಉಂಟಾಗಿರಬಹುದೇ? ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಂಡ ಮಂಗಳವಾರ ಗ್ರಾಮಗಳಲ್ಲಿ ಸಮೀಕ್ಷೆ ಆರಂಭಿಸಿತು. ಸಂತ್ರಸ್ತ ಜನರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದು ಶೇಗಾಂವ್ ಆರೋಗ್ಯ ಅಧಿಕಾರಿ ಡಾ ದೀಪಾಲಿ ಬಹೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಿಲ್ಲಾ ಪರಿಷತ್‌ನ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಶೇಗಾಂವ ತಾಲೂಕಿನ ಕಳವಾಡ, ಬೋಂಡಗಾಂವ, ಹಿಂಗನಾಳ ಗ್ರಾಮಗಳ ಸುಮಾರು 30 ಮಂದಿ ಕೂದಲುದುರುವಿಕೆ ಮತ್ತು ಬೊಕ್ಕತಲೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಗಲಕ್ಷಣಗಳಿಗೆ ಅನುಗುಣವಾಗಿ ಇಲಾಖೆಯು ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಿದೆ ಮತ್ತು ಚರ್ಮದ ಆರೈಕೆಗೆ ತಜ್ಞರ ಸಲಹೆಯನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ಬಹೇಕರ್ ಮಂಗಳವಾರ ಹೇಳಿದರು.
ಸಂಭವನೀಯ ಮಾಲಿನ್ಯವನ್ನು ಪರಿಶೀಲಿಸಲು ಈ ಗ್ರಾಮಗಳ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪರಿಷತ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.