ಕುಂಬಳೆ: ವಯನಾಡು ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಹಂಚಲು ಮಂಗಲ್ಪಾಡಿ ಗ್ರಾ.ಪಂ. ವತಿಯಿಂದ ಸಂಗ್ರ ಹಿಸಿದ್ದ ಆಹಾರ ವಸ್ತುಗಳ ಕಿಟ್‍ನ್ನು ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಮತ್ತು ಆಧಾರ ರಹಿತವಾಗಿದೆ ಎಂದು ಗ್ರಾ.ಪಂ. ಆಡಳಿತ ಸಮಿತಿ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದೆ.
ನ.24ರಂದು ಪಂಚಾಯಿತಿ ಸದಸ್ಯರಾದ ಮಜೀದ್ ಪಚ್ಚಂಬಳ, ಅಬ್ದುಲ್ ರಹ್ಮಾನ್ ನೇತೃತ್ವದ ತಂಡ ವಯನಾಡಿನ ವಿಕೋಪ ಭೂಮಿಯಾದ ಮೇಪ್ಪಾಡಿಗೆ ತೆರಳಿದ್ದು, ಸಾರ್ವಜನಿಕರಿಂದ ಸಂಗ್ರಹಿಸಿದ್ದ ಆಹಾರ ಸಾಮಗ್ರಿಗಳು ಮತ್ತು ಬಟ್ಟೆ-ಬರೆಗಳನ್ನು ಮೇಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಬಾಬು ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ ರುಬೀನಾ ನೌಫಾಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಉಪಾಧ್ಯಕ್ಷ ಯೂಸುಫ್ ಹೇರೂರು, ಸ್ಥಾಯಿ ಸಮಿತಿ ಅಧ್ಯಕ್ಷ ಇರ್ಫಾನ್ ಇಕ್ಬಾಲ್, ಗ್ರಾಪಂ ಸದಸ್ಯ ಮಜೀದ್ ಪಚ್ಚಂಬಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.