ಪಟ್ನಾ: ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಆರ್‌ಜೆಡಿ ಶಾಸಕ ಅಲೋಕ್ ಕುಮಾರ್ ಮೆಹ್ತಾ ಅವರ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ಶೋಧ ನಡೆಸಿದೆ.
ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಹಣ ದುರುಪಯೋಗಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಸುಮಾರು 18 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆರ್‌ಜೆಡಿ ಶಾಸಕ ಮತ್ತು ಬಿಹಾರದ ಮಾಜಿ ಸಚಿವರೂ ಆದ ಅಲೋಕ್ ಕುಮಾರ್ ಮೆಹ್ತಾ (58) ಅವರು ಬಿಹಾರ ಮೂಲದ ವೈಶಾಲಿ ಶಾಹ್ರಿ ವಿಕಾಸ್ (ವಿಎಸ್‌ವಿ) ಸಹಕಾರಿ ಬ್ಯಾಂಕ್‌ನ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ.
ಸುಮಾರು ₹85 ಕೋಟಿ ದುರುಪಯೋಗ ಆರೋಪದ ಮೇಲೆ ಬ್ಯಾಂಕ್ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ರಾಜ್ಯದ ಪೊಲೀಸರು ದಾಖಸಿರುವ ಎಫ್‌ಐಆರ್ ಆಧರಿಸಿ, ಹಣ ಅಕ್ರಮ ವರ್ಗಾವಣೆಯ ತನಿಖೆ ನಡೆಯುತ್ತಿದೆ. ಅಂದಾಜು 400 ಸಾಲದ ಖಾತೆಗಳ ಮೂಲಕ ವಂಚನೆ ಎಸಗಿರುವುದು ಕಂಡುಬಂದಿದೆ. ಅಲೋಕ್ ಮೆಹ್ತಾ ಮತ್ತು ಅವರ ಸಹಚರರಿಗೆ ಸಹಕರಿಸಿದ ಬ್ಯಾಂಕ್ ಉದ್ಯೋಗಿಗಳು ಹಾಗೂ ಇತರ ಖಾಸಗಿ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲೂ ಶೋಧ ಕಾರ್ಯ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್‌ಜೆಡಿ ಕಿಡಿ:
ಇ.ಡಿ ಕ್ರಮದ ವಿರುದ್ಧ ಕಿಡಿಕಾರಿರುವ ಆರ್‌ಜೆಡಿ ಪಕ್ಷವು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ಬಿಜೆಪಿಯು ಆರ್‌ಜೆಡಿ ಮತ್ತು ಇತರ ವಿರೋಧ ಪಕ್ಷಗಳ ನಾಯಕರ ವಿರುದ್ಧ ಇ.ಡಿ, ಸಿಬಿಐ ಮತ್ತು ಐಟಿ ಇಲಾಖೆಯನ್ನು ಬಳಸುತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಆರ್‌ಜೆಡಿಗೆ ಹೆದರುತ್ತಿರುವುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ ಅವರು ನಮ್ಮ ಪಕ್ಷದ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದ್ದಾರೆ' ಎಂದು ಆರ್‌ಜೆಡಿ ವಕ್ತಾರ (ಬಿಹಾರ ಘಟಕ) ಮೃತ್ಯುಂಜಯ್ ತಿವಾರಿ ಕಿಡಿಕಾರಿದ್ದಾರೆ.