ನವದೆಹಲಿ: ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ರಾಜ್ಯ ಮಾಹಿತಿ ಆಯೋಗಗಳಲ್ಲಿ (ಎಸ್‌ಐಸಿ) ಖಾಲಿಯಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಿಐಸಿನಲ್ಲಿ ಖಾಲಿಯಿರುವ ಮಾಹಿತಿ ಆಯುಕ್ತರ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮವಹಿಸುವಂತೆ ಕೇಂದ್ರಕ್ಕೆ ಸೂಚಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.
ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠ, 'ಈ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಿದೆ. ಅಲ್ಲಿ ಕೆಲಸ ಮಾಡಲು ಜನರು ಇಲ್ಲದಿದ್ದರೆ ಇಂತಹ ಸಂಸ್ಥೆಯನ್ನು ಹೊಂದುವುದರಿಂದ ಏನು ಪ್ರಯೋಜನ' ಎಂದು ಪ್ರಶ್ನಿಸಿತು.
ಮಾಹಿತಿ ಆಯೋಗದ ವಿವಿಧ ಹುದ್ದೆಗಳಿಗೆ ಅಧಿಕಾರಿಗಳನ್ನು ಮಾತ್ರ ನೇಮಿಸುತ್ತಿರುವುದಕ್ಕೆ ಪೀಠವು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
'ಇಡೀ ಆಯೋಗದಲ್ಲಿ ಸಮಾಜದ ಒಂದು ವರ್ಗದವರೂ ಮಾತ್ರ ತುಂಬಿಕೊಂಡಿದ್ದಾರೆ. ಅಧಿಕಾರಿಗಳನ್ನು ಮಾತ್ರ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಸಮಾಜದ ವಿವಿಧ ಸ್ತರಗಳ ಜನರನ್ನು ಏಕೆ ನೇಮಕ ಮಾಡುತ್ತಿಲ್ಲ. ಈ ಬಗ್ಗೆ ನಾವು ಹೆಚ್ಚು ಹೇಳಲು ಬಯಸುವುದಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು' ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹೇಳಿದರು.
ಅರ್ಜಿದಾರರಾದ ಅಂಜಲಿ ಭಾರದ್ವಾಜ್ ಹಾಗೂ ಇತರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, 'ಸಿಐಸಿ ಮತ್ತು ಎಸ್‌ಐಸಿನಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸುಪ್ರೀಂ ಕೋರ್ಟ್ 2019ರಲ್ಲೇ ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರ್ಕಾರಗಳು ನೇಮಕ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ಅನುಸರಿಸಿದೆ' ಎಂದು ಪೀಠಕ್ಕೆ ತಿಳಿಸಿದರು.
2024ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗಿರುವ ಆಯ್ಕೆ ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠವು ನಿರ್ದೇಶನ ನೀಡಿತು.