ಮುಂಬೈ: ಸರಪಂಚ್ ಸಂತೋಷ್ ದೇಶ್‌ಮುಖ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ₹2 ಕೋಟಿ ಸುಲಿಗೆ ಪ್ರಕರಣದ ಆರೋಪಿ ವಾಲ್ಮೀಕ್ ಕರಾಡ್ ಅವರು ಸಿಐಡಿ ಮುಂದೆ ಮಂಗಳವಾರ ಶರಣಾಗಿದ್ದಾರೆ. ಅವರು ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಅವರ ಆಪ್ತ.
ಬೀಡ್ ಜಿಲ್ಲೆಯಲ್ಲಿ ಡಿ.9ರಂದು ಸಂತೋಷ್ ದೇಶ್‌ಮುಖ್ ಅವರ ಹತ್ಯೆಯಾದ ಬಳಿಕ ವಾಲ್ಮೀಕ್ ತಲೆಮರೆಸಿಕೊಂಡಿದ್ದರು.
ದೇಶ್‌ಮುಖ್ ಅಪಹರಣ ಮತ್ತು ಹತ್ಯೆ, ಅವಾಡ ಸಮೂಹದಿಂದ ಹಣ ಸುಲಿಗೆ ಹಾಗೂ ಅದರ ಭದ್ರತಾ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳ ಬಗೆಗೆ ಸಿಐಡಿ ತನಿಖೆ ನಡೆಸುತ್ತಿದೆ.
'ನನ್ನ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಲಾಗಿದೆ. ನಾನು ನಿರೀಕ್ಷಣಾ ಜಾಮೀನು ಪಡೆಯಬಹುದಿತ್ತು. ಅದರ ಬದಲಾಗಿ ಸಿಐಡಿ ಮುಂದೆ ಶರಣಾಗುತ್ತೇನೆ. ಸಂತೋಷ್ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಮರಣದಂಡನೆ ವಿಧಿಸಬೇಕು. ರಾಜಕೀಯ ಕಾರಣಕ್ಕೆ ನನ್ನ ಹೆಸರನ್ನು ಈ ಪ್ರಕರಣದಲ್ಲಿ ಬಳಸಿಕೊಳ್ಳಲಾಗಿದೆ' ಎಂದು ವಾಲ್ಮೀಕ್ ಅವರು ಶರಣಾಗುವ ಮೊದಲು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂತೋಷ್ ಹತ್ಯೆಯಲ್ಲಿ ವಾಲ್ಮೀಕ್ ಕೈವಾಡವಿದೆ. ಸುಲಿಗೆ ಮಾಡುವುದನ್ನು ವಿರೋಧಿಸಿದ್ದಕ್ಕೆ ಕೊಲೆ ನಡೆದಿದೆ ಎಂದು ಸಂತೋಷ್ ಕುಟುಂಬಸ್ಥರು ಆರೋಪಿಸಿದ್ದರು.