ಮಂಜೇಶ್ವರ: ಆಧುನಿಕ ಸಮಾಜದ ಬಹುದೊಡ್ಡ ಪಿಡುಗಾದ ಮಾದಕ ದ್ರವ್ಯ ವ್ಯಸನ ಯುವ ಪೀಳಿಗೆಯ ಮೇಲೆ ಕರಿನೆರಳು ಬೀರಿದ್ದು ಇದರ ವಿರುದ್ಧ ಜನ ಜಾಗೃತಿಯನ್ನು ಲಕ್ಷ್ಯದಲ್ಲಿರಿಸಿ ಮೀಯಪದವು ಶ್ರೀವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಬುಧವಾರ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ ರಾವ್ ಅವರು ಮಾದಕ ದ್ರವ್ಯ ವ್ಯಕ್ತಿಯ ಬದುಕಿನ ಪತನವನ್ನು ಬಯಸುವ ಮಾಯಾಜಾಲವಾಗಿದ್ದು, ಭವ್ಯ ಸಮಾಜದ ನಿರ್ಮಾತೃಗಳಾದ ಯುವ ಪೀಳಿಗೆ ಕ್ಷಣಿಕದ ಸಂತೋಷಕ್ಕಾಗಿ, ಮನರಂಜನೆಗಾಗಿ ಮೈ ಮರೆಯಬಾರದು. ದುಶ್ಚಟಗಳಿಗೆ ಒಮ್ಮೆ ತಲೆಬಾಗಿದರೆ ವಿನಾಶಕ್ಕೆ ನಾವೇ ಮುನ್ನುಡಿ ಬರೆದಂತೆ. ಆದ್ದರಿಂದ ಬಣ್ಣದ ಜಗತ್ತಿನಲ್ಲಿ ಬಲು ಎಚ್ಚರ ಅಗತ್ಯ ಎಂದು ಮಕ್ಕಳಿಗೆ ಜಾಗೃತಿ ನೀಡಿದರು.
ತಲಚ್ಚೇರಿ ಬ್ರೆನ್ನನ್ ಕಾಲೇಜಿನ ನಿವೃತ್ತ ಪ್ರಾoಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಕದಕಟ್ಟೆ ವಲಯ ಮೇಲ್ವಿಚಾರಕ ಕೃಷ್ಣಪ್ಪ, ಶಾಲಾ ಮುಖ್ಯಶಿಕ್ಷಕಿ ಮೃದುಲಾ ಕೆ.ಯಂ ಶುಭ ಹಾರೈಸಿದರು. ಶಿಕ್ಷಕ ರಾಜಾರಾಮ ಸ್ವಾಗತಿಸಿ, ಲಕ್ಷ್ಮೀಶ ವಂದಿಸಿದರು. ಡಾ. ವಿಘ್ನೇಶ ಶರ್ಮ ನಿರೂಪಿಸಿದರು.