ಮುಂಬೈ: ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ (2015) ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಗುರುವಾರ ಸ್ಥಗಿತಗೊಳಿಸಿತು. ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಅದಾಗ್ಯೂ, ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ, ನಿತ್ಯ ನಡೆಸುವಂತೆ ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿತು.
ನ್ಯಾಯಮೂರ್ತಿಗಳಾದ ಎ. ಎಸ್.ಗಡ್ಕರಿ ಮತ್ತು ಕಮಲ್ ಖಾತಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, 'ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈಗಾಗಲೇ ವರದಿ ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆದಿರುವುದು ವರದಿಯಿಂದ ಗೊತ್ತಾಗುತ್ತದೆ. ಹೀಗಾಗಿ ವಿಭಾಗೀಯ ಪೀಠವು ತನಿಖೆಯ ಮೇಲ್ವಿಚಾರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ' ಎಂದು ತಿಳಿಸಿತು.
ಎಟಿಎಸ್ ವರದಿ ಪ್ರಕಾರ, ಇಬ್ಬರು ಆರೋಪಿಗಳು ಮಾತ್ರ ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚುವ ಕೆಲಸವಷ್ಟೇ ಬಾಕಿಯಿದೆ. ಈ ಆರೋಪಿಗಳನ್ನು ಬಂಧಿಸಿದ ಬಳಿಕ ತನಿಖಾ ಸಂಸ್ಥೆಯು ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಪೀಠ ಹೇಳಿತು.
ಕೊಲ್ಹಾಪುರದಲ್ಲಿ 2015ರ ಫೆಬ್ರುವರಿ 15ರಂದು ಗೋವಿಂದ ಪನ್ಸಾರೆ ಅವರು ವಾಯು ವಿಹಾರ ಮಾಡುತ್ತಿದ್ದಾಗ, ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಐದು ದಿನಗಳ ಬಳಿಕ ಅವರು ಮೃತಪಟ್ಟರು. ಈ ಕುರಿತು ತನಿಖೆಯನ್ನು ಆರಂಭದಲ್ಲಿ ಮಹಾರಾಷ್ಟ್ರದ ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿತು. ಬಳಿಕ 2022ರಲ್ಲಿ ಅದನ್ನು ಎಟಿಎಸ್‌ಗೆ ವರ್ಗಾಯಿಸಲಾಯಿತು.
2016ರಿಂದ ಹೈಕೋರ್ಟ್ ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿತ್ತು. ತನಿಖಾ ಸಂಸ್ಥೆಗಳು ನಿಯಮಿತವಾಗಿ ತನಿಖಾ ಪ್ರಗತಿ ವರದಿಗಳನ್ನು ಸಲ್ಲಿಸುತ್ತಿದ್ದವು.