ನವದೆಹಲಿ: ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಕಾಯ್ದೆಯ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕುರಿತು ಯಾವುದೇ ಉಲ್ಲೇಖವಿಲ್ಲ.
ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಈ ಕರಡು ಬಿಡುಗಡೆ ಮಾಡಲಾಗಿದೆ. ಶಿಫಾರಸುಗಳನ್ನು ಪರಿಗಣಿಸಿ ಫೆ.18ರ ನಂತರ ತಿದ್ದುಪಡಿ ಕಾಯ್ದೆ ಅಂತಿಮ ಸ್ವರೂಪ ಪಡೆಯಲಿದೆ.
'ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣೆ ಕಾಯ್ದೆ 40ರ ಉಪ ನಿಬಂಧನೆ (1) ಹಾಗೂ (2) ಅನ್ವಯ ಕೇಂದ್ರ ಸರ್ಕಾರ ತನ್ನ ಹಕ್ಕುಗಳನ್ನು ಚಲಾಯಿಸಿ ಕರಡನ್ನು ಪರಿಚಯಿಸಿದೆ. 2023ರಲ್ಲಿ ಹಾಗೂ ನಂತರದಲ್ಲಿ ಈ ಕಾಯ್ದೆ ವ್ಯಾಪ್ತಿಗೆ ಒಳಪಡಬಹುದಾದ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಇದನ್ನು ಪರಿಚಯಿಸಲಾಗುತ್ತಿದೆ' ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಕರಡಿನಲ್ಲಿ ಕಾಯ್ದೆಯ ಉಲ್ಲೇಖವಿದೆಯೇ ಹೊರತು, ತಪ್ಪಿತಸ್ಥರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣದ ಉಲ್ಲೇಖವಿಲ್ಲ. ಆದರೆ ಮೂಲ ಕಾಯ್ದೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಗೋಪ್ಯವಾಗಿ ಹಾಗೂ ಸುರಕ್ಷಿತವಾಗಿಡುವ ಹೊಣೆ ಹೊತ್ತವರು ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ₹250 ಕೋಟಿವರೆಗೂ ದಂಡ ವಿಧಿಸಲು ಅವಕಾಶವಿದೆ.