ನವದೆಹಲಿ:ಡಾಲರ್ ಎದುರು ರೂಪಾಯಿಯ ಅಪಮೌಲ್ಯದಿಂದಾಗಿ ಏರ್ ಇಂಡಿಯಾದ ಲಾಭದಲ್ಲಿ ಕುಸಿತ ಕಂಡು ಬಂದಿದೆ. ಆದರೆ ಅದನ್ನು ಸರಿದೂಗಿಸಲು ಏರ್ ಇಂಡಿಯಾಗೆ ಡಾಲರ್ ಬೆಲೆಯಲ್ಲಿ ಟಿಕೆಟ್ ದರ ನಿಗದಿ ಮಾಡುವ ಮೂಲಕ ಅಂತರರಾಷ್ಟ್ರೀಯ ಯಾನಗಳ ವೆಚ್ಚವನ್ನು ಸರಿದೂಗಿಸುವ ಆಯ್ಕೆಯೂ ಇದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಇತ್ತೀಚಿನ ವಾರಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದ್ದು, ಜನವರಿ 10ರಂದು ಡಾಲರ್ ಎದುರು 86.04 ರೂ.ಗೆ ದಾಖಲೆಯ ಕುಸಿತ ಕಂಡಿತ್ತು. ದುರ್ಬಲ ರೂಪಾಯಿ ಮೌಲ್ಯದಿಂದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಬಹುತೇಕ ವೆಚ್ಚವು ಡಾಲರ್ ನಲ್ಲಿರುವುದರಿಂದ, ಅದರ ಕಾರ್ಯಾಚರಣೆ ವೆಚ್ಚವೂ ಹೆಚ್ಚಳಗೊಂಡಿದೆ.
ರೂಪಾಯಿ ಅಪಮೌಲ್ಯವು ವಿಮಾನ ಯಾನ ಉದ್ಯಮ ಹಾಗೂ ಏರ್ ಇಂಡಿಯಾಗೆ ನಿಶ್ಚಿತವಾಗಿ ಸವಾಲನ್ನು ಒಡ್ಡಿದೆ. ಈ ಪರಿಸ್ಥಿತಿಯಲ್ಲಿ ಯಾನಗಳ ವೆಚ್ಚವನ್ನು ಸರಿದೂಗಿಸುವ ಪೂರಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸುಧಾರಿಸಬಹುದಾದ ಅನಿವಾರ್ಯತೆಯಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ನಿಪುಣ್ ಅಗರ್ವಾಲ್ ಹೇಳಿದ್ದಾರೆ.
"ನಮ್ಮ ಸಂಸ್ಥೆಯ ಮಾನವ ಸಂಪನ್ಮೂಲವನ್ನು ಹೊರತುಪಡಿಸಿ ಉಳಿದೆಲ್ಲ ವೆಚ್ಚವೂ ಡಾಲರೀಕರಣಗೊಂಡಿರುವುದರಿಂದ, ರೂಪಾಯಿಯ ಅಪಮೌಲ್ಯವು ನಮ್ಮ ವೆಚ್ಚ ಸ್ವರೂಪದ ಮೇಲೆ ನಿಶ್ಚಿತವಾಗಿ ಒತ್ತಡ ಹೇರಿದೆ. ಮಾನವ ಸಂಪನ್ಮೂಲ ವೆಚ್ಚವನ್ನು ಮಾತ್ರ ಸ್ಥಳೀಯ ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ರೂಪಾಯಿ ಎಷ್ಟು ಅಪಮೌಲ್ಯಗೊಳ್ಳುತ್ತದೋ, ಅಷ್ಟೇ ಒತ್ತಡ ನಮ್ಮ ವೆಚ್ಚ ಸ್ವರೂಪ ಹಾಗೂ ನಮ್ಮ ಲಾಭದ ಮೇಲೆ ಆಗಲಿದೆ" ಎಂದು ಅವರು ಈ ವಾರದ ಮಾಧ್ಯಮ ವಿವರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಏರ್ ಇಂಡಿಯಾ ಸಂಸ್ಥೆ ಪ್ರತಿ ದಿನ 1,168 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದ್ದು, ಇದರಲ್ಲಿ 313 ಅಂತರರಾಷ್ಟ್ರೀಯ ವೈಮಾನಿಕ ಸೇವೆಗಳು ಸೇರಿವೆ. ಈ ಪೈಕಿ 244 ವೈಮಾನಿಕ ಸೇವೆಗಳು ಕಡಿಮೆ ಅವಧಿಯದ್ದಾಗಿದ್ದರೆ, 69 ವೈಮಾನಿಕ ಸೇವೆಗಳು ದೀರ್ಘಾವಧಿಯದ್ದಾಗಿದೆ.