ನವದೆಹಲಿ: 'ಹ್ಯೂಮನ್ ಮೆಟಾಫ್ಯೂಮೊವೈರಸ್ (ಎಚ್‌ಎಂಪಿವಿ)' ಹೆಸರಿನ ಸೋಂಕು ಚೀನಾದಲ್ಲಿ ಆತಂಕ ಮೂಡಿಸಿದೆ' ಎಂಬ ವರದಿ ಮತ್ತು ಬೆಳವಣಿಗೆಗಳನ್ನು ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದು ಸರ್ಕಾರದ ಅಧಿಕೃತ ಮೂಲಗಳು ಶುಕ್ರವಾರ ಪ್ರತಿಕ್ರಿಯಿಸಿವೆ.
'ಸೋಂಕಿನ ಸ್ವರೂಪ ಕುರಿತು ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಮತ್ತು ಸಂಬಂಧಿಸಿದ ಬೆಳವಣಿಗೆಗಳತ್ತ ನಿರಂತರವಾಗಿ ನಿಗಾ ಇಡಲಾಗಿದೆ. ಆದರೆ, ಈ ಬಗ್ಗೆ ಸಾರ್ವತ್ರಿಕವಾಗಿ ಮುನ್ನೆಚ್ಚರಿಕೆ ನೀಡುವ ಅಗತ್ಯವಿಲ್ಲ' ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ (ಡಿಜಿಎಚ್‌ಎಸ್) ಡಾ. ಅತುಲ್ ಗೋಯಲ್ ಅವರು, 'ಎಚ್‌ಎಂಪಿವಿ ಎಂಬುದು ಉಸಿರಾಟದ ಸಮಸ್ಯೆಗೆ ಕಾರಣವಾಗುವ ಇತರೆ ವೈರಸ್‌ಗಳಂತೆಯೇ ಶೀತ ಉಂಟು ಮಾಡಲಿದೆ. ಯುವಜನರು ಮತ್ತು ವೃದ್ಧರಲ್ಲಿ ಜ್ವರ, ತೀವ್ರ ಶೀತದಂತಹ ಅನಾರೋಗ್ಯಕ್ಕೆ ಕಾರಣವಾಗಲಿದೆ' ಎಂದರು.
'ಎಚ್‌ಎಂಪಿವಿ ಸೋಂಕು ಚೀನಾದಲ್ಲಿ ವ್ಯಾಪಿಸಿದೆ ಎಂಬ ವರದಿಗಳು ಸಾಕಷ್ಟು ಹರಿದಾಡುತ್ತಿವೆ. ಭಾರತದಲ್ಲಿ ಸದ್ಯ ಉಸಿರಾಟದ ಸಮಸ್ಯೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನಾವು ವಿಶ್ಲೇಷಿಸಿದ್ಡೇವೆ. 2024ರ ಡಿಸೆಂಬರ್‌ನಲ್ಲಿ ಗಣನೀಯವಾಗಿ ಏರಿಕೆ ಕಂಡಿಲ್ಲ. ದೊಡ್ಡಸಂಖ್ಯೆಯಲ್ಲಿ ಜನರಿಗೆ ಬಾಧಿಸಿರುವ ಯಾವುದೇ ವರದಿಗಳಿಲ್ಲ. ಪ್ರಸ್ತುತ ಸ್ಥಿತಿ ಕುರಿತು ಮುನ್ನೆಚ್ಚರಿಕೆ ನೀಡುವ ಅಗತ್ಯವೂ ಇಲ್ಲ' ಎಂದೂ ವಿವರಿಸಿದರು.
'ಉಸಿರಾಟದ ಸೋಂಕು ಸಮಸ್ಯೆಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಲಿವೆ. ಸಹಜವಾಗಿಯೇ ನಮ್ಮ ಆಸ್ಪತ್ರೆಗಳು ಕೂಡಾ ಅಗತ್ಯ ಔಷಧಗಳು, ಹಾಸಿಗೆ ಸೌಲಭ್ಯದೊಂದಿಗೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುತ್ತವೆ' ಎಂದು ಗೋಯಲ್ ಪ್ರತಿಕ್ರಿಯಿಸಿದರು.
ಆದರೂ, ಸಾರ್ವಜನಿಕರು ಸಾಮಾನ್ಯವಾಗಿ ಪಾಲಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಕೆಮ್ಮು ಅಥವಾ ಶೀತ ಸಮಸ್ಯೆ ಕಂಡುಬಂದಲ್ಲಿ ಸೋಂಕು ಹರಡದಂತೆ ಕುಟುಂಬ ಸದಸ್ಯರ ಜೊತೆಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಉಸಿರಾಟ ಸಮಸ್ಯೆ ನಿವಾರಣೆಗೆ ಅಗತ್ಯ ಸಲಹೆಗಳನ್ನು ಪಾಲಿಸಬೇಕು ಹಾಗೂ ಶೀತ ಮತ್ತು ಜ್ವರ ಸಮಸ್ಯೆಗೆ ಲಭ್ಯವಿರುವ ಸಾಮಾನ್ಯ ಔಷಧವನ್ನೇ ಪಡೆಯಬಹುದು ಎಂದು ಹೇಳಿದರು.