ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ತೊಡೆದು ಹಾಕುವ ಮೂಲಕ ದೆಹಲಿ ಅಭಿವೃದ್ಧಿಗೆ ಒತ್ತು ನೀಡಲಿದೆ. ಯಾವುದೇ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದೂ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭರವಸೆ ನೀಡಿದ್ದಾರೆ.
ರೋಹಿಣಿ ಪ್ರದೇಶದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹತ್ತು ಷರ್ಷಗಳಿಂದ ಎಎಪಿ ಸರ್ಕಾರವು ದೆಹಲಿಯ ಅಭಿವೃದ್ದಿಗೆ ಕೇಂದ್ರದೊಂದಿಗೆ ಸಹಕಾರ ನೀಡಿಲ್ಲ. 'ಡಬಲ್ ಇಂಜಿನ್' ಸರ್ಕಾರದಿಂದ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಲಿದೆ. ರಾಷ್ಟ್ರ ರಾಜಧಾನಿಯ ಅಭಿವೃದ್ದಿಗೆ ಬಿಜೆಪಿಗೆ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದರು.
ಎಎಪಿ ಸರ್ಕಾರವನ್ನು ದೆಹಲಿಗೆ ಅಪ್ಪಳಿಸಿದ 'ಅನಾಹುತ' ಎಂದು ಹೇಳಿರುವ ಮೋದಿ, ಈ ಎಲ್ಲಾ ಬೆಳವಣೆಗೆಗೆ ಬಿಜೆಪಿ ನಾಂದಿ ಹಾಡಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಲು ಬಿಜೆಪಿ ಶ್ರಮಿಸಲಿದೆ ಎಂದು ಹೇಳಿದ್ದಾರೆ.
ಎಎಪಿ ಸರ್ಕಾರವನ್ನು ಕಿತ್ತೆಸೆದು ಬದಲಾವಣೆಯನ್ನು ತರುತ್ತೇವೆ. ದೆಹಲಿಗೆ ಅಪ್ಪಳಿಸಿದ ಅನಾಹುತವನ್ನು ತೊಡೆದು ಹಾಕುತ್ತೇವೆ ಎಂದೂ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದೆಹಲಿಯ ನ್ಯೂ ಅಶೋಕ್ ನಗರದವರೆಗಿನ 13 ಕಿ.ಮೀ ದೂರದ ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್) ಕಾರಿಡಾರ್ ಅನ್ನು ಮೋದಿ ಉದ್ಘಾಟಿಸಿದರು.