ಬದಿಯಡ್ಕ: ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ
ಕಾಮಗಾರಿ ಆರಂಭಿಸಿರುವ ವಿರುದ್ಧ ನೀರ್ಚಾಲು ಸಮೀಪದ ಮೊಳೆಯಾರ್ ಮುಂಡೋಳ್ ಕೈಗಾರಿಕಾ ಪಾರ್ಕ್ ವಿರೋಧಿಸಿ ಪ್ರತಿಭಟನೆ ಆರಂಭವಾಗಿದೆ.
ನೀರ್ಚಾಲು ಗ್ರಾಮದ 182/2, ಬೇಳ ಗ್ರಾಮದ 182, 92/2A, 97/2A1, 97/2AB2, 97/A1, 97/A1, 97/1D, 93/1A, 76/1A1, 95/B1A ಮತ್ತು 183/ 1A2 ಎಂಬೀ ಸರ್ವೆ ನಂಬರುಗಳಲ್ಲಿನ 12 ಎಕರೆ ಜಾಗದಲ್ಲಿ ಕೈಗಾರಿಕಾ ಪಾರ್ಕ್‌ಗೆ ಸ್ಥಳ ಗುರುತಿಸಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮಣ್ಣು- ಜಲ ಸಂರಕ್ಷಣೆಯನ್ನು ಕಾಪಾಡಿಕೊಂಡು ಜಲಾನಯನವನ್ನು ರಕ್ಷಿಸುವ ನಿಯಮಕ್ಕೆ ಅನುಗುಣವಾಗಿ ಸುತ್ತಮುತ್ತಲಿನ ರೈತರು ಕೃಷಿ ಕ್ಷೇತ್ರಕ್ಕೆ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಜಲಾನಯನವನ್ನು ತುಂಬುವ ಮೂಲಕ ಕೈಗಾರಿಕಾ ಪಾರ್ಕ್ ಕಾರ್ಯಾಚರಣೆ ಪ್ರಾರಂಭವಾಗಿದೆ.
ಕಾಸರಗೋಡು ಕೇರಳ ಸೇರ್ಪಡೆಗೆ ಹಿಂದೆಯೇ ಅಂದು ಪುತ್ತೂರು ತಹಶೀಲ್ ವ್ಯಾಪ್ತಿಗೊಳಪಟ್ಟ ಸ್ಥಳವಾಗಿ,ಆ ಸಂದರ್ಭದ ಎಡಿಎಂ ಈ ಪ್ರದೇಶದ ಪ್ರಾಕೃತಿಕ ನೀರೊರತೆ ಸಾರ್ವಜನಿಕವೆಂದು ಘೋಷಿಸಿ, ದಾಖಲೆಗೊಳಿಸಿದ್ದರು. ಆ ಬಳಿಕದ ಕೇರಳ ಕಂದಾಯ ಇಲಾಖೆಯೂ ಇದನ್ನು ಮಾನ್ಯಮಾಡಿ ಹಿಂದಿನ ಆದೇಶ ಊರ್ಜಿತಗೊಳಿಸಿ ಈವರೆಗೂ ಮುಂದುವರಿದು ಬಂದಿತ್ತು.
ಬೇಸಿಗೆಯ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಈ ಭಾಗದ ಮೂರು ಕಿ.ಮೀ ಜಮೀನಿಗೆ ಅಗತ್ಯ ನೀರು ಹರಿದು ಬರುತ್ತಿದ್ದ ಚರಂಡಿಗೆ ಎಸ್ಟೇಟ್ ನೆಪದಲ್ಲಿ ಇದೀಗ ಮಣ್ಣು ತುಂಬಿಸಲಾಗಿದೆ. ಒಂದೆಡೆ ಕೆರೆಕಟ್ಟೆ ತುಂಬಿ, ಇನ್ನೊಂದೆಡೆ ಪ್ರಕೃತಿ ವಿನಾಶ ಮಾಡುವ ಕೆಮಿಕಲ್ ಫ್ಯಾಕ್ಟರಿ ಮತ್ತಿತರ ಸಂಬಂಧಿ ಸಂಸ್ಥೆಗಳು ಇಲ್ಲಿ ಆರಂಭವಾಗಿದ್ದು, ಇದರಿಂದ ಕೃಷಿ ಕ್ಷೇತ್ರದ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಕೈಗಾರಿಕೆಯನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸುತ್ತೇವೆ ಎಂಬುದು ಸ್ಥಳೀಯ ನಿವಾಸಿಗಳ ವಿವರಣೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ರೈತ ಗಣೇಶ್ ಅಳಕ್ಕೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಜಿಲ್ಲಾಧಿಕಾರಿ, ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ, ಕಂದಾಯ, ಸ್ಥಳೀಯ ಸ್ಥಳೀಯಾಡಳಿತ ಇಲಾಖೆ ಮತ್ತಿತರರಿಗೆ ದೂರು ಸಲ್ಲಿಸಲಾಯಿತು.