ನವದೆಹಲಿ: ಹಿಂದುತ್ವದ ಚಿಂತಕ ವಿ.ಡಿ.ಸಾವರ್ಕರ್ ಅವರ ಹೆಸರಿನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶುಕ್ರವಾರ ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದರೆ, ಸಾವರ್ಕರ್ ಹೆಸರಿಡಲು ಕಾಂಗ್ರೆಸ್ ಪಕ್ಷ, ಎನ್‌ಎನ್‌ಯುಐ ಘಟಕ ವಿರೋಧ ವ್ಯಕ್ತಪಡಿಸಿವೆ.
ದೆಹಲಿ ವಿಶ್ವವಿದ್ಯಾಲಯವು ಇಲ್ಲಿನ ನಜಫಗಢದಲ್ಲಿ ವೀರ ಸಾವರ್ಕರ್ ಹೆಸರಿನ ಕಾಲೇಜು ಸ್ಥಾಪಿಸುತ್ತಿದೆ. ವಿಶ್ವವಿದ್ಯಾಲಯದ ಮೂರು ವಿವಿಧ ಯೋಜನೆಗಳಲ್ಲಿ ಕಾಲೇಜು ನಿರ್ಮಾಣ ಕೂಡ ಒಂದಾಗಿದ್ದು, ಉಳಿದಂತೆ ಎರಡು ಪ್ರತ್ಯೇಕ ಕ್ಯಾಂಪಸ್‌ಗಳನ್ನು ಅಭಿವೃದ್ಧಿಪಡಿಸಲಿದೆ.
ಕಾಲೇಜಿಗೆ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಅಧ್ಯಕ್ಷ ವರುಣ್ ಚೌಧರಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 'ಉಲ್ಲೇಖಿತ ಹೊಸ ಕಾಲೇಜಿಗೆ ಮನಮೋಹನ ಸಿಂಗ್ ಅವರ ಹೆಸರಿಡಬೇಕು. ಇದು, ಸಿಂಗ್ ಅವರಿಗೆ ಗೌರವ ಸಲ್ಲಿಸುವ ಉತ್ತಮ ಮಾರ್ಗವೂ ಆಗಿದೆ' ಎಂದು ಹೇಳಿದ್ದಾರೆ.