ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾದ ಅಡೂರು ಶ್ರೀಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಾಲಯದ ಐತಿಹಾಸಿಕ ಕೌಡಿಂಕಾನ ಯಾತ್ರೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಆಶೀರ್ವಾದಗಳೊಂದಿಗೆ, ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಇಂದು ನಡೆಯಲಿದೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿಧಿವಿಧಾನಗಳ ಬಳಿಕ ಇಂದು ಮುಂಜಾನೆ 3ಕ್ಕೆ ನಡೆ ತೆರೆದು ಕೊಡಿಮರದಡಿ ಮಹಾಪ್ರಾರ್ಥನೆ, ಬಳಿಕ ಕೌಂಡಿಂಕಾನ ಯಾತ್ರಾರಂಭ, ಮೂಲಸ್ಥಾನದಿಂದ ಮೃತ್ತಿಕಾ ಸಂಗ್ರಹ, ಶ್ರೀಕ್ಷೇತ್ರಕ್ಕೆ 11ರ ವೇಳೆಗೆ ಪುನರಾಗಮನ ನಡೆಯಲಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನದ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಶ್ರೀಕ್ಷೇತ್ರದಲ್ಲಿ ಬಿಂಬ ಚೈತನ್ಯ ವೃದ್ಧಿ, ಧನುಪೂಜೆ, ಸಹಸ್ರ ಕುಂಭಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮೂಲ ಮೃತ್ತಿಕಾ ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಮಧ್ಯಾಹ್ನ ಪ್ರಸಾದ ಭೋಜನ, ಅಪರಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಾಸುದೇವ ತಂತ್ರಿಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 8 ರಿಂದ ಶ್ರೀದೇವರ ಉತ್ಸವ ಬಲಿ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.