ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಂಸದೀಯ ರಾಜಕಾರಣದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಮಮತಾ ಬ್ಯಾನರ್ಜಿ ಅವರು ಜನಪ್ರಿಯ ರಾಜಕೀಯ ಪಕ್ಷವನ್ನು ಕಟ್ಟಿ ಸಫಲರಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಾಯಕ ಕುನಾಲ್ ಘೋಷ್ ಭಾನುವಾರ ಹೇಳಿದ್ದಾರೆ.
ಬೋಸ್ ಅವರು ಕಾಂಗ್ರೆಸ್‌ನಿಂದ ಹೊರಬಂದು 1939ರಲ್ಲಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಅನ್ನು ಕಟ್ಟಿದ್ದರು.
'ಅವರು (ನೇತಾಜಿ) ಐತಿಹಾಸಿಕವಾಗಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಆದರೆ, ಪಕ್ಷ ಸ್ಥಾಪನೆ ಬಳಿಕ ಸಂಸದೀಯ ರಾಜಕಾರಣದಲ್ಲಿ ವಿಫರಾಗಿದ್ದರು' ಎಂದು ಘೋಷ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆದ ಬಳಿಕ ಹೊಸ ಪಕ್ಷ ಸ್ಥಾಪಿಸಿ ಯಶಸ್ವಿಯಾಗುವುದು ಅಪರೂಪ ಎಂದೂ ಉಲ್ಲೇಖಿಸಿದ್ದಾರೆ.
ಮಮತಾ ಅವರನ್ನು ಹೊರಹಾಕಿದ ನಂತರ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಬಲ ಕುಸಿದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಶನಿವಾರ ಹೇಳಿದ್ದರು.
ಮಾಜಿ ಸಂಸದರೂ ಆಗಿರುವ ಭಟ್ಟಾಚಾರ್ಯ, ರಾಜ್ಯ ಘಟಕದ ಆಗಿನ ಅಧ್ಯಕ್ಷ ಸೋಮೆನ್ ಮಿತ್ರಾ ಅವರು, ಎಐಸಿಸಿ ಮುಖ್ಯಸ್ಥ ಸೀತಾರಾಮ್ ಕೇಸರಿ ಅವರ ಸೂಚನೆಯಂತೆ ಮಮತಾ ಅವರನ್ನು 1997ರಲ್ಲಿ ಪಕ್ಷದಿಂದ ಹೊರಹಾಕಿದ್ದರು. ಮಿತ್ರಾ ಅವರಿಗೆ ನಿರ್ಧಾರ ಬದಲಿಸುವಂತೆ ಸಲಹೆ ನೀಡಿದ್ದೆ. ಆದರೆ, ಹೈಕಮಾಂಡ್‌ನಿಂದ ಒತ್ತಡ ತೀವ್ರವಾಗಿತ್ತು ಎಂದಿದ್ದರು. ಅದಕ್ಕೆ ಪ್ರತಿಯಾಗಿ ಘೋಷ್ ಹೇಳಿಕೆ ನೀಡಿದ್ದಾರೆ.
'ಮಮತಾ ಅವರಲ್ಲಿದ್ದ ಹೋರಾಟದ ಮನೋಭಾವವನ್ನು ಗುರುತಿಸಲು ಕಾಂಗ್ರೆಸ್ ಪಕ್ಷ ವಿಫಲವಾಗಿತ್ತು. ನಾಯಕತ್ವದಲ್ಲಿನ ಭಿನ್ನಾಭಿಪ್ರಾಯದ ಕಾರಣ ಅವರನ್ನು ಹೊರದಬ್ಬಿತ್ತು. ಆದರೆ, ಅವರನ್ನು ಹೊರಹಾಕಿದ್ದನ್ನು ಜನರು ಒಪ್ಪಲಿಲ್ಲ. ಆ ಕಾರಣಕ್ಕಾಗಿಯೇ, ಅವರ ಪಕ್ಷಕ್ಕೆ ಸೂಕ್ತ ಸ್ಥಾನಮಾನ ನೀಡಿದ್ದಾರೆ' ಎಂದು ಪ್ರತಿಪಾದಿಸಿದ್ದಾರೆ.
1998ರಲ್ಲಿ ಟಿಎಂಸಿ ಸ್ಥಾಪಿಸಿದ ಮಮತಾ, ಸದ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. 2011ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರುವ ಮೂಲಕ, ಸಿಪಿಐ(ಎಂ) ನೇತೃತ್ವದ ಎಡ ಮೈತ್ರಿಕೂಟದ 34 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದ್ದರು.