ತಿರುವನಂತಪುರಂ: ಕೇರಳದ ನೂತನ ರಾಜ್ಯಪಾಲರಾಗಿ ನಿಯುಕ್ತರಾದ ಗೋವಾ ನಿವಾಸಿ ರಾಜೇಂದ್ರ ಆರ್ಲೇಕರ್ ಜ. 2ರಂದು ಕೇರಳದ 23ನೇ ರಾಜ್ಯಪಾಲರಾಗಿ ತಿರುವನಂತಪುರ ರಾಜಭವನದಲ್ಲಿ ಪ್ರಮಾಣವಚನಗೈದು ಅಧಿಕಾರ ಸ್ವಿಕರಿಸುವರು.
ಗೋವಾದಿಂದ ಕೇರಳಕ್ಕೆ ಹೊರಡುವ ಮೊದಲು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರನ್ನು ಭೇಟಿಯಾಗಿ ಕೇರಳದ ಕುರಿತಾಗಿ ಸುದೀರ್ಘ ಮಾತುಕತೆ ನಡೆಸಿದ್ದರು. ಸಂಜೆ ತಿರುವನಂತಪುರ ತಲುಪಿದ ರಾಜೇಂದ್ರ ಆರ್ಲೇಕರ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತ್ರೃತ್ವದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಜ. 2ರಂದು ಬೆಳಿಗ್ಗೆ 10ಕ್ಕೆ ರಾಜಭವನದಲ್ಲಿ ಕೇರಳಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ನಿತಿನ್ ಮಧುಕರ್ ಅವರು ಪ್ರಮಾಣವಚನ ಭೋಧಿಸುವರು.
ಕೇರಳದಿಂದ ಬಿಹಾರಕ್ಕೆ ವರ್ಗಾವಣೆಗೊಂಡ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರ ಜಾಗಕ್ಕೆ ರಾಜೇಂದ್ರ ಆರ್ಲೇಕರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಕೇರಳ ಸರ್ಕಾರದ ನಡುವಿನ ಸಂಬಂಧ ತೃಪ್ತಿಕರವಾಗಿರಲಿಲ್ಲ. ಇದು ಅನೇಕ ವಿವಾದಗಳಿಗೆ ಕಾರಣವಾಗಿತ್ತು
ಎಳವೆಯಿಂದಲೂ ಆರೆಸ್ಸೆಸ್ ಕಾರ್ಯಕರ್ತನಾಗಿ ಬೆಳೆದ ರಾಜೇಂದ್ರ ಆರ್ಲೇಕರ್ ಅವರು 1980ರಿಂದ ಗೋವಾದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಗೋವಾ ಬಿಜೆಪಿ ರಾಜ್ಯಾಧ್ಯಕ್ಷ, ಸಚಿವ, ರಾಜ್ಯಪಾಲ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಗೋವಾ ವಿಧಾನಸಭೆಯನ್ನು ಕಾಗದ ರಹಿತ ವಿಧಾನಸಭೆಯಾಗಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.