ಬದಿಯಡ್ಕ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದಂಗವಾಗಿ ಮಧುಪುರ ಗಣೇಶ ಭಜನಾವಳಿ,ಮಲ್ಲ ಶ್ರೀ ದುರ್ಗಾಮೃತ ಸೇರಿದಂತೆ ಹದಿಮೂರು ಭಜನಾ ಪುಸ್ತಕಗಳ ಕರ್ತೃ, ಪ್ರಸಿದ್ಧ ಭಜನಾ ಹಾಡುಗಾರ ಯಂ.ಪರಮೇಶ್ವರ ನಾಯ್ಕ ಅರ್ತಲ ಅವರನ್ನು ಕೊಲ್ಲಂಗಾನದ ಅರ್ತಲದಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಪರಮೇಶ್ವರ ನಾಯ್ಕ, ಶಾಂತಾ ದಂಪತಿಯರಿಗೆ ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಎ. ಶ್ರೀನಾಥ್ ಅಭಿನಂದನ ಭಾಷಣ ಮಾಡಿದರು. ಪರಮೇಶ್ವರ ನಾಯ್ಕ ಅವರು 13 ಭಜನಾ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದವರು. ಉತ್ತಮ ಭಜನಾ ಹಾಡುಗಾರರೂ ಆಗಿದ್ದಾರೆ .ಜೊತೆಗೆ ಭಜನೆಯನ್ನು ರಾಗ ತಾಳ ಲಯ ಬದ್ಧವಾಗಿ ಹೇಗೆ ಹಾಡಬಹುದೆಂದು ವಿದ್ಯಾರ್ಥಿಗಳಿಗೆ, ಯುವಜನಾಂಗಕ್ಕೆ ಮಾರ್ಗದರ್ಶನ ಮಾಡಿದವರೂ ಆಗಿದ್ದಾರೆ ಎಂದು ಪ್ರೊ.ಎ. ಶ್ರೀನಾಥ್ ಹೇಳಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಶುಭಹಾರೈಸಿದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಪರಮೇಶ್ವರ ನಾಯ್ಕ ಅವರು ಕೆಲವು ಭಜನೆಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.