ಲಖನೌ: ಸಂಭಲ್‌ನಲ್ಲಿ 1978ರಲ್ಲಿ ನಡೆದಿದ್ದ ಕೋಮು ಗಲಭೆಗಳ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಉತ್ತರ ಪ್ರದೇಶ ಸರ್ಕಾರ ಸೂಚಿಸಿದೆ.
'ಒಂದು ವಾರದ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ' ಎಂದು ಮೂಲಗಳು ಹೇಳಿವೆ.
'1978ರ ಕೋಮು ಗಲಭೆಗಳಿಗೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಸಂಭಲ್ ಜಿಲ್ಲಾಧಿಕಾರಿಗೆ ಗೃಹ ಇಲಾಖೆ ಪತ್ರ ಬರೆದಿದೆ.
ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಯವರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಜವಾಬ್ದಾರಿ ನೀಡಿದ್ದಾರೆ' ಎಂದು ಹೇಳಿವೆ.
'ಕೋಮು ಗಲಭೆಗಳ ಕುರಿತು ತನಿಖೆ ಆರಂಭಿಸಲು ನಿರ್ಧರಿಸಿಲ್ಲ. ವರದಿಯಲ್ಲಿನ ವಿಷಯದ ಆಧಾರದ ಮೇಲೆ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ' ಎಂದೂ ಮೂಲಗಳು ಹೇಳಿವೆ.
ಬಿಜೆಪಿ ಶಾಸಕ ಶ್ರೀಚಂದ್ರ ಶರ್ಮಾ ಅವರು 1978ರಲ್ಲಿ ನಡೆದ ಕೋಮು ಗಲಭೆಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರವನ್ನು ಕೋರಿದ್ದರು. ಇದರ ಬೆನ್ನಲ್ಲೇ, ವರದಿ ನೀಡುವಂತೆ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚಿಸಿದೆ ಎಂದು ಸಂಭಲ್ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಈ ವಿಚಾರ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, '1978ರಲ್ಲಿ ಎರಡು ತಿಂಗಳಿಗೂ ಹೆಚ್ಚು ನಡೆದಿದ್ದ ಕೋಮು ಗಲಭೆಗಳಲ್ಲಿ 184 ಹಿಂದೂಗಳ ಹತ್ಯೆಯಾಗಿತ್ತು' ಎಂದು ಹೇಳಿದ್ದರು.
ದೇವಾಲಯವೊಂದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬ ದೂರಿಗೆ ಸಂಬಂಧಿಸಿ, ಮಸೀದಿಯ ಸಮೀಕ್ಷೆ ನಡೆಸುವಂತೆ ಇತ್ತೀಚೆಗೆ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿತ್ತು. ಇದನ್ನು ವಿರೋಧಿಸಿ ಇಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು.