ನವದೆಹಲಿ: ಭಾರತೀಯ ಸೇನೆಯ ದೃಢತೆ, ವೃತ್ತಿಪರತೆ ಮತ್ತು ಸಮರ್ಪಣಾ ಮನೋಭಾವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಜತೆಗೆ, ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಒತ್ತಿ ಹೇಳಿದ್ದಾರೆ.
77ನೇ 'ಭಾರತೀಯ ಸೇನಾ ದಿನ'ದ ಪ್ರಯುಕ್ತ 'ಎಕ್ಸ್'ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, 'ಇಂದು ಸೇನಾ ದಿನ.
'ಭಾರತೀಯ ಸೇನೆಯು ಸಂಕಲ್ಪ, ವೃತ್ತಿಪರತೆ ಮತ್ತು ಸಮರ್ಪಣಾ ಮನೋಭಾವವನ್ನು ಸಾರುತ್ತದೆ. ನಮ್ಮ ಗಡಿಗಳನ್ನು ರಕ್ಷಿಸುವುದರ ಜೊತೆಗೆ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾನವೀಯ ಸಹಾಯವನ್ನು ಒದಗಿಸುವಲ್ಲಿ ನಮ್ಮ ಸೇನೆಯು ಛಾಪು ಮೂಡಿಸಿದೆ' ಎಂದು ಮೋದಿ ಬಣ್ಣಿಸಿದ್ದಾರೆ.
ಏಪ್ರಿಲ್ 1, 1895 ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ 1949ರಲ್ಲಿ ಸೇನೆಯ ಮೊದಲ ಮುಖ್ಯಸ್ಥರನ್ನು ನೇಮಕ ಮಾಡಲಾಯಿತು. ಈ ಐತಿಹಾಸಿಕ ದಿನದಂದು (ಜನವರಿ 15) ಭಾರತೀಯ ಸೇನೆಯ ಔಪಚಾರಿಕ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಬ್ಯಾಟನ್ ಹಸ್ತಾಂತರಿಸಿದ್ದರು.