ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ, ಅನಿವಾಸಿ ಭಾರತೀಯ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸ್ ವಶಕ್ಕೆ ಹಸ್ತಾಂತರಿಸುವಂತೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆದೇಶಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಾಂತ್ರಿಕೆ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40)ಎಂಬವರು ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾಗಿದ್ದಾರೆ. ಈ ಹಿಂದೆ ನಾಲ್ಕು ದಿವಸಗಳ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದ್ದು, ಹೆಚ್ಚಿನ ತನಿಖೆಗಾಗಿ ಇದು ಎರಡನೇ ಬಾರಿಗೆ ಪೊಲೀಸ್ ವಶಕ್ಕೆ ಒಪ್ಪಿಸಲು ಸೂಚಿಸಲಾಗಿದೆ. ಆರೋಪಿಗಳನ್ನು ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ಹೊಸದುರ್ಗದ ಕೆಳಗಿನ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ಅಬ್ದುಲ್ ಗಫೂರ್ ಹಾಜಿ ಅವರ ಮೃತದೇಹ 2023 ಏ. 14ರಂದು ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಹಜ ಸಾವೆಂದು ತಿಳಿಸಿ ದಫನ ನಡೆಸಲಾಗಿದ್ದರೂ, ಪುತ್ರನ ದೂರಿನ ಮೇರೆಗೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಬಯಲಿಗೆ ಬಂದಿದೆ.