ನವದೆಹಲಿ: ವ್ಯಭಿಚಾರದ ಆರೋಪವನ್ನಷ್ಟೇ ಆಧಾರವಾಗಿ ಇರಿಸಿಕೊಂಡು ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂಬ ಆದೇಶ ನೀಡುವುದರಿಂದ ವ್ಯಕ್ತಿಯ ಘನತೆಯ ಬದುಕಿನ ಹಕ್ಕು ಮತ್ತು ಖಾಸಗಿತನದ ಹಕ್ಕಿಗೆ ಧಕ್ಕೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ನ್ನು ಉಲ್ಲೇಖಿಸಿರುವ ಪೀಠವು, ವಿವಾಹ ಸಂಬಂಧವು ಚಾಲ್ತಿಯಲ್ಲಿ ಇರುವಷ್ಟು ಕಾಲ, ಪತ್ನಿಯಿಂದ ಜನಿಸಿದ ಮಗುವಿಗೆ ಆಕೆಯ ಪತಿಯೇ ತಂದೆ ಎಂಬ ಬಲವಾದ ನಂಬಿಕೆ ಇರುತ್ತದೆ ಎಂದು ಹೇಳಿದೆ.
'ಮಗುವಿನ ಹುಟ್ಟಿನ ಬಗ್ಗೆ ಅನಗತ್ಯವಾದ ಯಾವುದೇ ಪ್ರಶ್ನೆಗಳು ಬರಬಾರದು ಎಂಬ ಉದ್ದೇಶದಿಂದ ಈ ತತ್ವವನ್ನು ರೂಪಿಸಲಾಗಿದೆ. ಮಗುವಿನ ಹುಟ್ಟಿನ ಬಗ್ಗೆ ಪ್ರಶ್ನೆ ಎತ್ತುವ ವ್ಯಕ್ತಿಯು, ಪತಿ-ಪತ್ನಿಯ ನಡುವೆ ಸಂಬಂಧವೇ ಇರಲಿಲ್ಲ ಎಂಬ ನೆಲೆಯಲ್ಲಿ ಮಾತ್ರವೇ ತನ್ನ ಆರೋಪವನ್ನು ಸಾಬೀತು ಮಾಡಬಹುದು' ಎಂದು ಪೀಠ ಸ್ಪಷ್ಟಪಡಿಸಿದೆ.
ಮಗು ವಿವಾಹಜನ್ಯ ಹೌದೇ ಎಂಬ ಪ್ರಶ್ನೆಯನ್ನು ಹೊಂದಿರುವ ಪ್ರಕರಣಗಳಲ್ಲಿ ಮಗುವಿನ ಘನತೆ ಮತ್ತು ಖಾಸಗಿತನವನ್ನು ರಕ್ಷಿಸಬೇಕಾಗುತ್ತದೆ ಎಂದು ಪೀಠವು ಹೇಳಿದೆ.