ತಿರುವನಂತಪುರಂ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಎಂಬ ಗುರಿಯನ್ನು ಸಾಧಿಸಲು ಯುವಕರ ಪ್ರಗತಿ ಮತ್ತು ಅವರ ಸಹಭಾಗಿತ್ವ ಅಗತ್ಯ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದರು.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿರುವ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ವಿಕಾಸ್ ಭಾರತ್ ಯುವ ನಾಯಕರ ಸಂವಾದದಲ್ಲಿ ಭಾಗವಹಿಸಿದ್ದ ಕೇರಳ ತಂಡಕ್ಕೆ ರಾಜಭವನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವಕರಿಗೆ ಅವಕಾಶ ಕಲ್ಪಿಸಿ ತಂತ್ರಜ್ಞಾನ, ಕೈಗಾರಿಕೆ, ಸಂಸ್ಕøತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳನ್ನು ಹುಡುಕುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಾಗಿದೆ ಎಂದರು. ಜನವರಿ 10, 11, 12 ದಿನಗಳಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ವಿಕಾಸ್ ಭಾರತ್ ಯುವ ನಾಯಕರ ಸಂವಾದದಲ್ಲಿ ಕೇರಳವನ್ನು ಪ್ರತಿನಿಧಿಸಲು ಆಯ್ಕೆಯಾದ 39 ಸದಸ್ಯರ ತಂಡವನ್ನು ರಾಜ್ಯಪಾಲರು ಸನ್ಮಾನಿಸಿದರು.
ಇತರ ರಾಜ್ಯಗಳ ಯುವಜನರೊಂದಿಗೆ ಸಕಾರಾತ್ಮಕವಾಗಿ ಸಂವಹನ ನಡೆಸಲು ತಂಡವನ್ನು ಪ್ರೋತ್ಸಾಹಿಸಿದ ರಾಜ್ಯಪಾಲರು, ಇಡೀ ದೇಶವು ಕೇರಳದ ಸಾಕ್ಷರ ಯುವಕರ ಕೊಡುಗೆಯನ್ನು ಗಮನಿಸುತ್ತಿದೆ ಎಂದ ಅವರು, ಸದಸ್ಯರಿಗೆ ರಾಜಭವನದ ಸಂಪೂರ್ಣ ಬೆಂಬಲ ಮತ್ತು ಸಹಾಯದ ಭರವಸೆ ನೀಡಿದರು. ನೆಹರು ಯುವ ಕೇಂದ್ರ ಸಂಘಟನೆ ರಾಜ್ಯ ಸಂಚಾಲಕ ಎಂ.ಅನಿಲ್ ಕುಮಾರ್ ವಿಕಾಸ್ ಭಾರತ್ ಯುವ ನಾಯಕರ ಸಂವಾದ ಕುರಿತು ವಿವರಿಸಿದರು.
ಕೇರಳ ತಂಡವು ಮೇರಾ ಯುವ ಭಾರತ್ ಪೋರ್ಟಲ್‍ನಲ್ಲಿ ವಿವಿಧ ಹಂತಗಳಲ್ಲಿ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ 39 ಮಹಿಳೆಯರು ಮತ್ತು ಪುರುಷರನ್ನು ಒಳಗೊಂಡಿದೆ. ಅವರು ರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು 10 ಆಯ್ದ ವಿಷಯಗಳ ಕುರಿತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತುತಪಡಿಸುತ್ತಾರೆ. ಮೇರಾ ಯುವ ಭಾರತ್ ಪೋರ್ಟಲ್ ಮೂಲಕ ನವೆಂಬರ್ 25 ರಿಂದ ಡಿಸೆಂಬರ್ 5 ರವರೆಗೆ ಆಯೋಜಿಸಲಾದ ವಿಕಾಸ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆಗಳ 3500 ವಿಜೇತರಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 239 ಜನರನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು. ಪವರ್‍ಪಾಯಿಂಟ್ ಪ್ರಸ್ತುತಿಗಳು ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಭಾಗವಹಿಸುವವರನ್ನು ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಕಾಸ್ ಭಾರತ್ ಯುವ ನಾಯಕರ ಸಂವಾದವು ರಾಷ್ಟ್ರೀಯ ಯುವ ಉತ್ಸವ 2025 ರ ಮರುರೂಪವಾಗಿದೆ. ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಪರಿಷ್ಕೃತ ಯುವಜನೋತ್ಸವಕ್ಕೆ ವಿಕಾಸ್ ಭಾರತ್ ಯುವ ನಾಯಕರ ಸಂವಾದ ಎಂದು ಹೆಸರಿಸಲಾಗಿದೆ. ಈ ಕ್ರಿಯಾತ್ಮಕ ವೇದಿಕೆಯು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನದ ಸಾಕ್ಷಾತ್ಕಾರಕ್ಕೆ ಕೊಡುಗೆ ನೀಡಲು ಯುವಕರು ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.