ಚೆನ್ನೈ: ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭೆಯಲ್ಲಿ ಭಾಷಣ ಮಾಡದೆ ನಿರ್ಗಮಿಸಿದ ಪ್ರಸಂಗ ಸೋಮವಾರ ನಡೆದಿದೆ.
ಪ್ರಸಕ್ತ ಸಾಲಿನ ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲರು ತಮ್ಮ ಸಾಂಪ್ರದಾಯಿಕ ಭಾಷಣ ಮಾಡಬೇಕಿತ್ತು. ಅದರೆ, ವಿಧಾನಸಭೆಯಲ್ಲಿ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಅವರು ಸದನದಿಂದ ಹೊರನಡೆದರು.
ಇದಕ್ಕೂ ಮುನ್ನ ಮುಖ್ಯ ವಿರೋಧ ಪಕ್ಷವಾದ ಎಐಎಡಿಎಂಕೆಯ ಶಾಸಕರು ಸ್ಪೀಕರ್ ಪೀಠದ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಪ್ರತಿಭಟಿಸಿದರು. ಬಳಿಕ ಸ್ಪೀಕರ್ ಎಂ. ಅಪ್ಪಾವು ಅವರ ನಿರ್ದೇಶನದ ಮೇರೆಗೆ ಮಾರ್ಷಲ್‌ಗಳು ಎಐಎಡಿಎಂಕೆ ಸದಸ್ಯರನ್ನು ಸದನದಿಂದ ಹೊರಕ್ಕೆ ಕರೆದುಕೊಂಡು ಹೋದರು.
ಇದೇ ವೇಳೆ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗಿದರು ಮತ್ತು ಕಪ್ಪು ಬ್ಯಾಡ್ಜ್ ಧರಿಸಿ ವಿರೋಧ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗದ್ದಲ ಉಂಟಾಯಿತು. ಅಣ್ಣಾ ವಿ.ವಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಬಿಜೆಪಿ ಮತ್ತು ಪಿಎಂಕೆ ಪಕ್ಷಗಳ ಶಾಸಕರು ಸಭಾತ್ಯಾಗ ನಡೆಸಿದರು.
'ಸಂವಿಧಾನ ಮತ್ತು ರಾಷ್ಟ್ರಗೀತೆಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಇನ್ನೊಮ್ಮೆ ಅವಮಾನ ಆಗಿದೆ' ಎಂದು ಆರೋಪಿಸಿ ರಾಜಭವನ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
'ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂಬುದು ನಮ್ಮ ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಮೊದಲ ಮೂಲಭೂತ ಕರ್ತವ್ಯ. ಎಲ್ಲ ರಾಜ್ಯಗಳ ಶಾಸನಸಭೆಗಳಲ್ಲಿ ರಾಜ್ಯಪಾಲರ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ, ತಮಿಳುನಾಡಿನ ವಿಧಾನಸಭೆಯಲ್ಲಿ ರಾಜ್ಯಪಾಲರು ಬಂದಾಗ 'ತಮಿಳು ತಾಯಿ ವಾಜ್ತು' (ತಮಿಳುನಾಡಿನ ರಾಜ್ಯಗೀತೆ) ಅನ್ನು ಮಾತ್ರ ಹಾಡಲಾಯಿತು' ಎಂದು ರಾಜಭವನ ತಿಳಿಸಿದೆ.
'ರಾಷ್ಟ್ರಗೀತೆ ಪ್ರಸ್ತುತ ಪಡಿಸುವ ಸಾಂವಿಧಾನಿಕ ಕರ್ತವ್ಯದ ಕುರಿತು ಮುಖ್ಯಮಂತ್ರಿ, ಸಭಾ ನಾಯಕರು ಮತ್ತು ಸ್ಪೀಕರ್ ಅವರಿಗೆ ರಾಜ್ಯಪಾಲರು ಗೌರವಯುತವಾಗಿ ಮನವಿ ಮಾಡಿದರು. ಆದರೆ ಅವರು ನಿರಾಕರಿಸಿದರು. ಇದರಿಂದ ತೀವ್ರ ಬೇಸರಗೊಂಡ ರಾಜ್ಯಪಾಲರು ಸದನದಿಂದ ನಿರ್ಗಮಿಸಿದರು' ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
'ರಾಜ್ಯಪಾಲರಿಂದ ಪುನರಾವರ್ತನೆ':
'ಕಳೆದ ವರ್ಷ ಸದನದಲ್ಲಿ ಭಾಷಣವನ್ನು ಪೂರ್ಣವಾಗಿ ಓದದ ರಾಜ್ಯಪಾಲರು ಈ ಬಾರಿಯೂ ಅದೇ ರೀತಿ ಪುನರಾವರ್ತನೆ ಮಾಡಿದ್ದಾರೆ' ಎಂದು ಸದನದ ನಾಯಕ, ಹಿರಿಯ ಸಚಿವ ದುರೈಮುರುಗನ್ ಪ್ರತಿಕ್ರಿಯಿಸಿದರು.
'ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಸ್ಪೀಕರ್ ಅವರಿಗೆ ಕಳೆದ ವರ್ಷ ಪತ್ರ ಬರೆದಿದ್ದರು. ರಾಜ್ಯಪಾಲರ ಭಾಷಣಕ್ಕೂ ಮುನ್ನ ರಾಜ್ಯಗೀತೆ ಮತ್ತು ಭಾಷಣದ ಬಳಿಕ ರಾಷ್ಟ್ರಗೀತೆ ಹಾಡುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂಬುದನ್ನು ಆಗಲೇ ಸ್ಪಷ್ಟಪಡಿಸಲಾಗಿತ್ತು' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಇದು ಗೊತ್ತಿದ್ದರೂ ರಾಜ್ಯಪಾಲರು ಮತ್ತೊಮ್ಮೆ ಅದೇ ವಿಷಯವನ್ನು ಪ್ರಸ್ತಾಪಿಸಿ, ಭಾಷಣ ಮಾಡದೇ ಹೊರ ನಡೆದಿದ್ದಾರೆ. ಹಾಗಾದರೆ ಅವರ ನಿಜವಾದ ಉದ್ದೇಶ ಏನಾಗಿತ್ತು' ಎಂದು ಅವರು ಪ್ರಶ್ನಿಸಿದರು.
ರಾಜ್ಯಪಾಲರ ನಡೆ ಬಾಲಿಶ: ಸ್ಟ್ಯಾಲಿನ್
ಚೆನ್ನೈ: ವಿಧಾನಸಭೆಯಲ್ಲಿ ತಮ್ಮ ಸಾಂಪ್ರದಾಯಿಕ ಭಾಷಣ ಮಾಡದೆ ರಾಜ್ಯಪಾಲ ಆರ್.ಎನ್.ರವಿ ಅವರು ನಿರ್ಗಮಿಸಿರುವುದು ಬಾಲಿಶವಾಗಿದೆ. ಅವರು ರಾಜ್ಯದ ಜನರು ಸರ್ಕಾರ ಮತ್ತು ವಿಧಾನಸಭೆಯನ್ನು ನಿರಂತರವಾಗಿ ಹೀಗೆ ಅವಮಾನಿಸಿಕೊಂಡು ಬಂದಿದ್ದಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಆರೋಪಿಸಿದ್ದಾರೆ. 'ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಮನಸ್ಸಿಲ್ಲದ ರವಿ ಅವರು ಇನ್ನೂ ಏಕೆ ರಾಜ್ಯಪಾಲ ಹುದ್ದೆಗೆ ಅಂಟಿಕೊಂಡಿದ್ದಾರೆ' ಎಂದು ಅವರು 'ಎಕ್ಸ್'ನಲ್ಲಿ ಪ್ರಶ್ನೆ ಮಾಡಿದ್ದಾರೆ. 'ರಾಜ್ಯಪಾಲರು ವಿಧಾನಸಭೆಯಲ್ಲಿ ಸರ್ಕಾರದ ಭಾಷಣವನ್ನು ಓದುವುದು ಪ್ರಜಾಸತ್ತಾತ್ಮಕ ಸಂಪ್ರದಾಯ. ಆದರೆ ರವಿ ಅವರನ್ನು ಅದನ್ನು ಉಲ್ಲಂಘಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ' ಎಂದು ಸ್ಟ್ಯಾಲಿನ್ ಆರೋಪ ಮಾಡಿದ್ದಾರೆ. ಪ್ರತಿಭಟನೆಗೆ ಕರೆ: ರಾಜ್ಯಪಾಲರ ನಡೆಯನ್ನು ಖಂಡಿಸಿ ಮಂಗಳವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಡಿಎಂಕೆ ಕರೆ ನೀಡಿದೆ.
ತುರ್ತುಪರಿಸ್ಥಿತಿ ದಿನಗಳ ನೆನಪಾದವು: ಪಳನಿಸ್ವಾಮಿ 'ತಮಿಳುನಾಡಿನ ವಿಧಾನಸಭಾ ನಡಾವಳಿಯನ್ನು ಸೋಮವಾರ ಪೂರ್ಣ ಪ್ರಮಾಣದಲ್ಲಿ ಸೆನ್ಸಾರ್ ಮಾಡಲಾಗಿತ್ತು. ಇದು ದೇಶದ ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಸುವಂತೆ ಮಾಡಿತು' ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. 'ರಾಜ್ಯಪಾಲರು ಸದನದಿಂದ ನಿರ್ಗಮಿಸಿದ ಬಳಿಕ ಅವರ ಭಾಷಣದ ತಮಿಳು ಪ್ರತಿಯನ್ನು ಸ್ಪೀಕರ್ ಅಪ್ಪಾವು ಓದಿದರು. ಅದು ಸ್ಪೀಕರ್ ಭಾಷಣವಾಗುತ್ತದೆಯೇ ಹೊರತು ರಾಜ್ಯಪಾಲರ ಭಾಷಣ ಆಗುವುದಿಲ್ಲ. ಈ ರೀತಿ ಆದದ್ದು ಇತಿಹಾಸದಲ್ಲಿಯೇ ಮೊದಲು' ಎಂದರು.