ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರನ್ನು ಸರ್ಕಾರ ಉದ್ದೇಶಪೂರ್ವಕವಾಗಿ ವಂಚಿಸುತ್ತಿರುವುದಾಗಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ, ಸಂಸದೆ ಜೆಬಿ ಮೆತ್ತರ್ ತಿಳಿಸಿದ್ದಾರೆ. ಮಹಿಳಾ ಸಾಹಸ್ ಕೇರಳ ಯಾತ್ರೆಗೆ ಕುತ್ತಿಕ್ಕೋಲಿನಲ್ಲಿ ನೀಡಲಾದ ಸ್ವಾಗತ ಸಮಾರಂಬದಲ್ಲಿ ಅವರು ಮಾತನಾಡಿದರು. ಸುಮಾರು ನಾಲ್ಕು ಸಾವಿರ ಸಂತ್ರಸ್ತರಿಗೆ ಹಾಗೂ ಇತರರಿಗೆ ಐದು ಲಕ್ಷ ರೂ. ನೆರವು ನೀಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಡರಂಗ ಸರ್ಕಾರ ಗಾಳಿಗೆ ತೂರಿದೆ. ಪಿಂಚಣಿ, ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ನೆರವು ಸಮಯಕ್ಕೆ ಸರಿಯಾಗಿ ಲಭಿಸದಿರುವುದರಿಂದ ಸಂತ್ರಸ್ತರು ಯಾತನೆ ಅನುಭವಿಸುವಂತಾಗಿದೆ. ಎಂಡೋಸಲ್ಫಾನ್ ಕೀಟನಾಶಕದಿಂದ ಉಂಟಾಗಿರುವ ಅನಾಹುತಕ್ಕಿಂತ ಹೆಚ್ಚಿನ ಸಂಕಷ್ಟ ಸರ್ಕಾರದಿಂದ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಮಹಿಳಾ ಸಾಹಸ ಕೇರಳ ಯಾತ್ರೆ ಮುಳಿಯಾರ್, ದೇಲಂಪಾಡಿ ಕುತ್ತಿಕ್ಕೋಲ್, ಬಂದಡ್ಕ, ಪುಲ್ಲೂರು ಪೆರಿಯ,ಚೆಮ್ಮಾ ಮೊದಲಾದೆಡೆ ನಡೆದ ಸ್ವಾಗತ ಸಭೆಗಳಲ್ಲಿ
ರಾಜಮೋಹನ್ ಉನ್ನಿಥಾನ್ ಎಂಪಿ, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಕಾರ್ಯದರ್ಶಿ ಧನ್ಯಾಸುರೇಶ್, ಮಾಜಿ ಡಿ.ಸಿ.ಸಿ ಅಧ್ಯಕ್ಷ ಹಕೀಂ ಕುನ್ನೆಲ್, ಕೆಪಿಸಿಸಿ ಕಾರ್ಯದರ್ಶಿ
ಕೆ.ನೀಲಕಂಠನ್, ಯುಡಿಎಫ್ ಸಂಚಾಲಕ ಎ. ಗೋವಿಂದನ್ ನಾಯರ್, ತಿರುವನಂತಪುರ ಮಾಜಿ ಡಿ.ಸಿ.ಸಿ ಅಧ್ಯಕ್ಷ ನೆಯ್ಯಟಿಂಕರ ಸನಲ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಉಪಸ್ಥಿತರಿದ್ದರು.