ಕುಂಬಳೆ: ಭ್ರಷ್ಟಾಚಾರದ ಏರಿಕೆ, ಪ್ರಕೃತಿ ನಾಶ, ದೇಶದ್ರೋಹ ಪ್ರಕರಣಗಳ ಹೆಚ್ಚಳ, ಸಮಾಜ ದ್ರೋಹಿಗಳ ಅಟ್ಟಹಾಸ, ಮಹಿಳೆಯರ ಶೋಷಣೆಗಳು ಬೆಳೆಯುತ್ತಿರುವ ಮಧ್ಯೆ ಇಂತಹ ಕಾನೂನು ಭಂಜಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಲಿಖಿತ ದೂರು ನೀಡಿದರೂ ಭ್ರಷ್ಟ ಸರ್ಕಾರಿ ಉದ್ಯೋಗಿಗಳು, ರಾಜಕಾರಣಿಗಳು ತುರ್ತು ಕ್ರಮ ಕೈಗೊಳ್ಳದೆ ಜನರನ್ನು ಹತಾಶೆಗೆ ತಳ್ಳುತ್ತಿರುವುದನ್ನು ಖಂಡಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಜನಪರ ಕಾಳಜಿಯಿಂದ ಸ್ಪರ್ಧಾ ಕಣಕ್ಕೆ ಇಳಿಯುವುದಾಗಿ ಆರ್.ಟಿ.ಐ., ಸಾಮಾಜಿಕ ಕಾರ್ಯಕರ್ತ ಎನ್.ಕೇಶವ ನಾಯಕ್ ನಾಯ್ಕಾಪು ಅವರು ಕುಂಬಳೆಯಲ್ಲಿ ಬುಧವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರದ ಪುರಾತನ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳನ್ನು ನಾಶಮಾಡಲು ಎಲ್ಲಾ ರಾಜ್ಯ ಸರ್ಕಾರಗಳೂ ಹವಣಿಸುತ್ತಿವೆ. ಪ್ರಮುಖವಾಗಿ ಕೇರಳ ಇದರಲ್ಲಿ ಮುಂದಿದೆ.ಇಲ್ಲಿಯ ಮರ ಸಹಿತ ಅರಣ್ಯೋತ್ಪನ್ನಗಳು, ಮಣ್ಣು, ಕಲ್ಲುಗಳನ್ನು ಸರ್ಕಾರಿ ಗಣಿ ಇಲಾಖೆ, ಅರಣ್ಯ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಲಂಚದ ಆಸೆಗೆ ಮರುಳಾಗಿ ಅನ್ಯ ಪ್ರದೇಶಗಳಿಗೆ ಮಾರುವ ಮೂಲಕ ಹಗಲು ದರೋಡೆ ಅವ್ಯಾಹತವಾಗಿ ನಡೆಯುತ್ತಿದೆ ಎಂದವರು ಆರೋಪಿಸಿದರು. ಇತ್ತೀಚೆಗೆ ಬೆಳೆಯುತ್ತಿರುವ ಪ್ರಕೃತಿ ವಿಕೋಪಗಳಿಗೆ ಇಂತಹ ಅಕ್ರಗಳು ಕಾರಣವಾಗಿದ್ದು, ಜನಸಾಮಾನ್ಯರು ಹೈರಾಣರಾಗಿದ್ದಾರೆ. ಕಾನೂನು ಪಾಲಕರೇ ಕಾನೂನು ಭಂಜಕರಾಗಿರುವ ಇಂತಹ ವ್ಯವಸ್ಥೆಗೆ ಸೆಡ್ಡುಹೊಡೆದು ಸಾಮಾನ್ಯ ಜನರ ಧ್ವನಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭ ಅವರು 1992 ರಿಂದಲೂ ತಾನು ಅಂದಿನ ಕೇರಳ ಮುಖ್ಯಮಂತ್ರಿ ಇ.ಕೆ.ನಾಯನ್ನಾರ್ ಸಹಿತ ಆ ಬಳಿಕದ ಎಲ್ಲಾ ಮುಖ್ಯಮಂತ್ರಿಗಳು, ಕಂದಾಯ, ಲೋಕೋಪಯೋಗಿ, ಅರಣ್ಯ, ಅಬಕಾರಿ ಸಚಿವರು, ಅಧಿಕಾರಿಗಳಿಗೆ ನಿರಂತರ ಬರೆದ ಪತ್ರಗಳನ್ನು ಪ್ರದರ್ಶಿಸಿದರು.