ನವದೆಹಲಿ (PTI): ಬಜೆಟ್ ಅಂಗವಾಗಿ ಶನಿವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ವರ್ಚುವಲ್ ಸಭೆಯ ಮೂಲಕ ಕೃಷಿ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಹಾಲಿ ಇರುವ ಯೋಜನೆಗಳು ಮತ್ತು ಬಜೆಟ್‌ನಲ್ಲಿ ಕೃಷಿಗೆ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಕೃಷಿ ಸಚಿವರಿಂದ ಸಲಹೆ ಪಡೆದರು.
ಸರ್ಕಾರವು ಕೃಷಿ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆರು ಅಂಶಗಳ ಕಾರ್ಯತಂತ್ರ ರೂಪಿಸಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಹೊಸ ತಳಿ ಬೀಜಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳ ಬಳಕೆ ಮೂಲಕ ಹೆಕ್ಟೇರ್‌ವಾರು ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮವಹಿಸಲಿದೆ ಎಂದು ಹೇಳಿದರು.
ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಸೂಕ್ಷ್ಮ ನೀರಾವರಿ, ಹೊಸ ತಂತ್ರಜ್ಞಾನ ಮತ್ತು ಕೃಷಿ ವಿಧಾನ ಅಳವಡಿಕೆಗೆ ಮುಂದಾಗಿದೆ ಎಂದರು.
ಪಿಎಂ-ಕಿಸಾನ್, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಡಿಎಪಿ ರಸಗೊಬ್ಬರಕ್ಕೆ ಸಬ್ಸಿಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.