ಭುವನೇಶ್ವರ: 'ಜಾಗತಿಕ ಕಾರ್ಯಪಡೆ ರಚನೆಯತ್ತ ದೇಶ ಯೋಜನೆ ಹೊಂದಿದ್ದು, ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಪಾತ್ರ ಮಹತ್ವದ್ದು' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಪ್ರವಾಸಿ ಭಾರತೀಯ ದಿವಸದ ಅಂಗವಾಗಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಗುರುವಾರ ಅವರು ಮಾತನಾಡಿದ್ದಾರೆ.
'ವಿದೇಶಗಳಲ್ಲಿರುವ ಭಾರತೀಯರ ಪ್ರತಿಯೊಂದ ಅಗತ್ಯ ಸನ್ನಿವೇಶದಲ್ಲೂ ಅವರ ಬೆನ್ನಿಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ. ಈ ಆತ್ಮವಿಶ್ವಾಸದಿಂದಲೇ ಎಲ್ಲರೂ ವಿದೇಶಗಳಲ್ಲಿ ನೆಮ್ಮದಿಯಿಂದ ಇದ್ದಾರೆ. ವಿಶ್ವದ ಎಲ್ಲೆಡೆ ಇರುವ ಭಾರತೀಯರ ಸಾಧನೆಯಿಂದ ದೇಶ ಹೆಮ್ಮೆ ಪಡುವಂತಾಗಿದೆ' ಎಂದರು.
'ಜಾಗತೀಕರಣದ ಯುಗದಲ್ಲಿ ಸಾಗುವ ಪ್ರತಿಯೊಂದು ವರ್ಷವೂ ಹೊರದೇಶದಲ್ಲಿರುವ ಭಾರತೀಯರ ಪಾಲಿಗೆ ಬಹುಮುಖ್ಯ. ತಂತ್ರಜ್ಞಾನ, ಉತ್ತಮ ಕಾರ್ಯವಿಧಾನ ಅಥವಾ ಮೂಲಸೌಕರ್ಯ, ಪ್ರವಾಸೋದ್ಯಮ, ವ್ಯಾಪಾರ ಅಥವಾ ಹೂಡಿಕೆ ಇಂಥ ದ್ವಿಮುಖ ಹರಿವು ಜಾಗತಿಕ ಕಾರ್ಯಪಡೆ ನಿರ್ಮಾಣಕ್ಕೆ ಬಹುಮುಖ್ಯ' ಎಂದು ಜೈಶಂಕರ್ ಹೇಳಿದ್ದಾರೆ.
'ಭಾರತ ಹಾಗೂ ಜಗತ್ತಿನೊಂದಿಗೆ ಕೊಂಡಿಯಾಗಿರುವ ಅನಿವಾಸಿ ಭಾರತೀಯರು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಜನಕೇಂದ್ರಿತ ಬದಲಾವಣೆಗಳನ್ನು ತಂದ ಪ್ರಧಾನಿ ಮೋದಿ ಅವರ ಸರ್ಕಾರವೂ ಅನಿವಾಸಿ ಭಾರತೀಯರಿಂದ ಪ್ರಯೋಜನ ಪಡೆದಿದೆ. ಹೀಗಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಅನಿವಾಸಿ ಭಾರತೀಯರು ಯಾವುದೇ ವ್ಯವಹಾರ ಕೈಗೊಳ್ಳಲು, ಇಲ್ಲಿ ನೆಲೆಸಲು ಹಾಗೂ ಸಾರಿಗೆಯಂತ ಸೌಕರ್ಯಗಳನ್ನು ಪೂರೈಕೆ ಮಾಡಲು ಸಾಧ್ಯವಾಗಿದೆ' ಎಂದಿದ್ದಾರೆ.
'ಕಳೆದ ಒಂದು ದಶಕದಲ್ಲಿ ಪಾಸ್‌ಪೋರ್ಟ್ ನೀಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಕಾನ್ಸುಲರ್‌ಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಕಾರ್ಯಗತ ಮಾಡಲಾಗಿದೆ. ಈ ಎಲ್ಲಾ ಕಾರ್ಯಗಳಲ್ಲೂ ಮೋದಿ ಸರ್ಕಾರ ಬೆಂಬಲ ಬಹುಮುಖ್ಯವಾಗಿದೆ. ಪೂರ್ವದ ರಾಜ್ಯಗಳು ದೇಶದ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಎಲ್ಲಾ ಹಂತಗಳಲ್ಲೂ ಪ್ರಯತ್ನ ಮಾಡಿವೆ' ಎಂದು ಬಣ್ಣಿಸಿದರು.