ಗುವಾಹಟಿ: ಗೂಗಲ್ ಮ್ಯಾಪ್ ನೋಡಿಕೊಂಡು ರೇಡ್ ಮಾಡಲು ಹೊರಟಿದ್ದ ಅಸ್ಸಾಂ ಪೊಲೀಸರ 16 ಸದಸ್ಯರ ತಂಡವು ತಮಗರಿವಿಲ್ಲದಂತೆ ತಪ್ಪಾಗಿ ನಾಗಾಲ್ಯಾಂಡ್ ಪ್ರವೇಶಿಸಿದ್ದು, ಸ್ಥಳೀಯರು ಅವರನ್ನು ಕ್ರಿಮಿನಲ್‌ಗಳೆಂದು ಭಾವಿಸಿ ರಾತ್ರಿ ಇಡೀ ಬಂಧಿಸಿಟ್ಟಿದ್ದ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಒಬ್ಬ ಆರೋಪಿಯನ್ನು ಬಂಧಿಸಲು ಜೋರ್ಹಾಟ್ ಜಿಲ್ಲೆಯ ಪೊಲೀಸರು, ಕಾರ್ಯಾಚರಣೆಗಿಳಿದಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಗೂಗಲ್ ಮ್ಯಾಪ್‌ನಲ್ಲಿ ಅದೊಂದು ಚಹಾ ತೋಟವೆಂದು ತೋರಿಸಲಾಗಿತ್ತು. ಆದರೆ, ಅದು ನಾಗಾಲ್ಯಾಂಡ್‌ನ ಪ್ರದೇಶವಾಗಿತ್ತು. ಗೂಗಲ್ ಮ್ಯಾಪ್ ಮತ್ತು ಜಿಪಿಎಸ್‌ನ ತಪ್ಪು ಮಾಹಿತಿ ಆಧರಿಸಿ ನಾಗಾಲ್ಯಾಂಡ್ ಪ್ರವೇಶಿಸಿದ್ದರಿಂದ ಗೊಂದಲದಲ್ಲಿ ಕ್ರಿಮಿನಲ್‌ಗಳೆಂದು ಭಾವಿಸಿದ ಸ್ಥಳೀಯರು ಬಂಧಿಸಿಡಲಾಗಿತ್ತು'ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರಿಂದ ಯಾರೋ ದುಷ್ಕರ್ಮಿಗಳಿರಬೇಕೆಂದು ನಾಗಾಲ್ಯಾಂಡ್‌ನ ಜನ ಭಾವಿಸಿದ್ದರು. 16 ಮಂದಿಯ ತಂಡದಲ್ಲಿ ಮೂವರು ಮಾತ್ರ ಸಮವಸ್ತ್ರ ಧರಿಸಿದ್ದರು. ಉಳಿದವರು ಸಿವಿಲ್ ಡ್ರೆಸ್‌ನಲ್ಲಿದ್ದರು. ಇದೂ ಸಹ ಸ್ಥಳೀಯರ ಗೊಂದಲಕ್ಕೆ ಕಾರಣವಾಗಿತ್ತು. ಪೊಲೀಸರ ಮೇಲೆ ಅವರು ಹಲ್ಲೆ ಸಹ ನಡೆಸಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಪಡೆದ ಜೋರ್ಹಾಟ್ ಪೊಲೀಸರು ಕೂಡಲೇ ನಾಗಾಲ್ಯಾಂಡ್‌ನ ಮೊಕೊಕ್‌ಚುಂಗ್ ಎಸ್‌ಪಿಇ ಅವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರ ತಂಡವನ್ನು ಕಳುಹಿಸಿ ಅಸ್ಸಾಂ ಪೊಲೀಸರನ್ನು ಬಿಡುಗಡೆ ಮಾಡಿಸಲಾಗಿದೆ.
ನಾಗಾಲ್ಯಾಂಡ್ ಪೊಲೀಸರ ತಂಡ ಬಂದ ಬಳಿಕವಷ್ಟೇ ವಾಸ್ತವ ಸ್ಥಳೀಯರ ಅರಿವಿಗೆ ಬಂದಿದೆ. ಬಳಿಕ, ಪೊಲೀಸರನ್ನು ಬಿಡುಗಡೆ ಮಾಡಲಾಗಿದೆ.