ನವದೆಹಲಿ: ಆರೋಗ್ಯ ಸೇವೆಯು ನಿರೀಕ್ಷಿತ ಮಟ್ಟದಲ್ಲಿ ಇರದಿದ್ದುದರಿಂದ ಉಂಟಾಗುವ ಅತೃಪ್ತಿಯು 'ವೈದ್ಯರಿಂದ ನಿರ್ಲಕ್ಷ್ಯ ಉಂಟಾಗಿದೆ' ಎಂಬುದನ್ನು ಸಾಬೀತು ಮಾಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ. ಪತ್ನಿಯ ಸಾವಿನ ಕಾರಣಕ್ಕೆ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
'ವೈದ್ಯರು ಸಮಂಜಸವಾದ ಮಟ್ಟದಲ್ಲಿ ತಜ್ಞತೆ ಹೊಂದಿರಬೇಕು ಎಂದು ಬಯಸಲಾಗುತ್ತದೆ. ಆದರೆ, ವೈದ್ಯರ ಕೃತ್ಯವು, ಸಮರ್ಥವಾದ ವೃತ್ತಿನಿರತರು ಹೊಂದಿರಬೇಕಾದ ಒಪ್ಪಿತ ಗುಣಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಇತ್ತೇ ಎಂಬುದನ್ನು ಆಧರಿಸಿ ವೈದ್ಯಕೀಯ ನಿರ್ಲಕ್ಷ್ಯದ ಕುರಿತಾಗಿ ತೀರ್ಮಾನಿಸಬೇಕಾಗುತ್ತದೆ. ಅದು ಸರಿಯಾದ ಮಾನದಂಡವಾಗುತ್ತದೆ' ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಡಿಸೆಂಬರ್ 20ರಂದು ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.
ಅರ್ಜಿದಾರ ವ್ಯಕ್ತಿಯ ಪತ್ನಿಯು 2016ರಲ್ಲಿ ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯೊಂದರ ಕೆಲವು ವೈದ್ಯರ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. 'ಕೆಲವು ತಕ್ಷಣದ ಕ್ರಮಗಳನ್ನು ಅರ್ಜಿದಾರರು ಬಯಸಿದ್ದಿರಬಹುದು. ಆದರೆ ವೈದ್ಯರು ತೀರಾ ಅಸ್ಥಿರವಾಗಿದ್ದ ರೋಗಿಯೊಬ್ಬರನ್ನು ತಪಾಸಣೆ ನಡೆಸಿ, ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಚಿಕಿತ್ಸೆಗಳಿಗೆ ಆದ್ಯತೆ ನೀಡಬೇಕು. ಕುಟುಂಬದ ನಿರೀಕ್ಷೆಗಳಿಗೆ ಅನುಗುಣವಾಗಿ ಆದ್ಯತೆಯನ್ನು ನಿರ್ಧರಿಸಲಾಗದು' ಎಂದು ಕೋರ್ಟ್ ಹೇಳಿದೆ.
ಯುಕ್ತವಾದ ಕೌಶಲ ಹಾಗೂ ದಕ್ಷತೆಯೊಂದಿಗೆ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಿದಾಗ, ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಭಾವಿಸಲು ಆಗುವುದಿಲ್ಲ. ವೈದ್ಯರು ವೈದ್ಯಕೀಯ ಅಗತ್ಯಕ್ಕೆ ಮತ್ತು ವೃತ್ತಿಪರ ತೀರ್ಮಾನಕ್ಕೆ ಅನುಗುಣವಾಗಿ ಮುನ್ನಡೆಯಬೇಕಾಗುತ್ತದೆ ಎಂದು ಕೂಡ ಪೀಠವು ಹೇಳಿದೆ.